ಲೋಕಸಭಾ ಚುನಾವಣೆ | ನಾಳೆ(ಮೇ 7) ಮೂರನೇ ಹಂತದ ಮತದಾನ
PC : PTI
ಹೊಸದಿಲ್ಲಿ : ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ಹತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮೂರನೇ ಹಂತದ ಲೋಕಸಭಾ ಚುನಾವಣೆಗಾಗಿ ಮತದಾನ ಮಂಗಳವಾರ ನಡೆಯಲಿದೆ. ಜಮ್ಮು-ಕಾಶ್ಮೀರದ ಅನಂತನಾಗ್ ಮತ್ತು ರಜೌರಿ ಲೋಕಸಭಾ ಕ್ಷೇತ್ರದಲ್ಲಿಯೂ ಮಂಗಳವಾರವೇ ಮತದಾನ ನಡೆಯಬೇಕಿತ್ತಾದರೂ ವಿವಿಧ ಸಂಪರ್ಕ ಸಮಸ್ಯೆಗಳಿಂದಾಗಿ ಅದನ್ನು ಮೇ 25ಕ್ಕೆ ಮುಂದೂಡಲಾಗಿದೆ. ಮೂರನೇ ಹಂತದ ಮತದಾನ ಮಂಗಳವಾರ ಬೆಳಿಗ್ಗೆ ಏಳು ಗಂಟೆಗೆ ಆರಂಭಗೊಂಡು ಸಂಜೆ ಐದು ಗಂಟೆಗೆ ಅಂತ್ಯಗೊಳ್ಳಲಿದೆ. ಜೂ.4ರಂದು ಮತಗಳ ಎಣಿಕೆ ನಡೆಯಲಿದೆ.
ಅಸ್ಸಾಮಿನ 4, ಬಿಹಾರದ 5, ಛತ್ತೀಸ್ ಗಡದ 7, ಗೋವಾದ 2, ಗುಜರಾತಿನ 26, ಮಧ್ಯಪ್ರದೇಶದ 8, ಮಹಾರಾಷ್ಟ್ರದ 11, ಉತ್ತರ ಪ್ರದೇಶದ 10, ಪಶ್ಚಿಮ ಬಂಗಾಳದ 4, ಕರ್ನಾಟಕದ 14 ಹಾಗೂ ದಾದ್ರಾ-ನಗರ ಹವೇಲಿ ಮತ್ತು ದಾಮನ್-ದಿಯುನ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ಮತದಾನ ನಡೆಯಲಿದೆ.
1,300ಕ್ಕೂ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದು,ಈ ಪೈಕಿ 120 ಮಹಿಳೆಯರು ಸೇರಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ಜ್ಯೋತಿರಾದಿತ್ಯ ಸಿಂದಿಯಾ, ಮನ್ಸುಖ್ ಮಾಂಡವೀಯ, ಪರಷೋತ್ತಮ ರೂಪಾಲಾ, ಪ್ರಹ್ಲಾದ ಜೋಶಿ ಮತ್ತು ಎಸ್.ಪಿ.ಸಿಂಗ್ ಬಾಘೆಲ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ದಿಗ್ವಿಜಯ ಸಿಂಗ್ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.
ಮೂರನೇ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದ ಹಲವು ಸದಸ್ಯರೂ ಕಣದಲ್ಲಿದ್ದಾರೆ.