ಲೋಕಸಭಾ ಚುನಾವಣೆ: 58 ಕ್ಷೇತ್ರಗಳಲ್ಲಿ ಮತದಾನ ಆರಂಭ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಆರು ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 58 ಕ್ಷೇತ್ರಗಳಲ್ಲಿಮುಂಜಾನೆ 7 ಗಂಟೆಗೆ ಮತದಾನ ಆರಂಭವಾಗಿದೆ. ದೆಹಲಿಯ ಏಳು, ಉತ್ತರ ಪ್ರದೇಶದ 14, ಹರ್ಯಾಣದ ಎಲ್ಲ 10, ಬಿಹಾರ ಹಾಗೂ ಪಶ್ಚಿಮ ಬಂಗಾಳದ ತಲಾ 8, ಒಡಿಶಾದ 6, ಜಾರ್ಖಂಡ್ನ 4 ಹಾಗೂ ಜಮ್ಮು ಮತ್ತು ಕಾಶ್ಮೀರದ ಒಂದು ಸ್ಥಾನದಲ್ಲಿ ಮತದಾನ ಈ ಹಂತದಲ್ಲಿ ನಡೆಯುತ್ತಿದೆ.
ಜಮ್ಮು ಕಾಶ್ಮೀರದ ಅನಂತ್ನಾಗ್ ಕ್ಷೇತ್ರದ ಮತದಾನ ಮೇ 7ರಂದು ನಿಗದಿಯಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಮುಂದೂಡಲ್ಪಟ್ಟಿತ್ತು.
ಬಿಜೆಪಿಯ ಧರ್ಮೇಂದ್ರ ಪ್ರಧಾನ್, ಮನೋಜ್ ತಿವಾರಿ, ಮೇನಕಾ ಗಾಂಧಿ, ಅಭಿಜಿತ್ ಗಂಗೋಪಾಧ್ಯಾಯ, ಮನೋಹರಲಾಲ್ ಖಟ್ಟರ್, ನವೀನ್ ಜಿಂದಾಲ್ ಹಾಗೂ ರಾವ್ ಇಂದ್ರಜೀತ್ ಸಿಂಗ್, ಕಾಂಗ್ರೆಸ್ ನ ಕನ್ನಯ್ಯ ಕುಮಾರ್, ಪಿಡಿಪಿಯ ಮೆಹಬೂಬಾ ಮುಫ್ತಿ ಕಣದಲ್ಲಿರುವ ಪ್ರಮುಖರು. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಒಟ್ಟು 889 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ. ಒಡಿಶಾದ 42 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಮತದಾನ ನಡೆಯುತ್ತಿದ್ದು, ಇದು ರಾಜ್ಯದಲ್ಲಿ ಮೂರನೇ ಹಾಗೂ ಕೊನೆಯ ಹಂತದ ಮತದಾನವಾಗಿದೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ದೆಹಲಿಯಲ್ಲಿ ಮುಂಜಾನೆಯೇ ಮತಗಟ್ಟೆಗೆ ಆಗಮಿಸಿ ಮೊದಲಿಗರಾಗಿ ತಮ್ಮ ಹಕ್ಕು ಚಲಾಯಿಸಿದರು. ಸ್ಥಳಾಂತರಗೊಂಡಿರುವ 26 ಸಾವಿರಕ್ಕೂ ಅಧಿಕ ಕಾಶ್ಮೀರಿ ಪಂಡಿತರು, ಜಮ್ಮು, ಉಧಾಂಪುರ ಮತ್ತು ದೆಹಲಿಯಲ್ಲಿ ವ್ಯವಸ್ಥೆ ಮಾಡಲಾಗಿರುವ 34 ವಿಶೇಷ ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ.
ಬಿಜೆಪಿಯ ಕರ್ನಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಮನೋಹರಲಾಲ್ ಖಟ್ಟರ್ ಮುಂಜಾನೆಯೇ ಮತ ಚಲಾಯಿಸಿದ್ದಾರೆ. ದಿವ್ಯಾಂಶು ಬುಧಿರಾಜ ಅವರನ್ನು ಕಾಂಗ್ರೆಸ್ ಈ ಕ್ಷೇತ್ರದಿಂದ ಕಣಕ್ಕಿಳಿಸಿದೆ.