2024ರ ಲೋಕಸಭಾ ಚುನಾವಣೆಗಾಗಿ ಬಿಜೆಪಿಯಿಂದ 1,737.68 ಕೋ.ರೂ.ವೆಚ್ಚ: ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಕೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಬಿಜೆಪಿಯು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಖರ್ಚುವೆಚ್ಚ ವರದಿಯ ಪ್ರಕಾರ ಪಕ್ಷವು 2024ರ ಲೋಕಸಭಾ ಚುನಾವಣೆಗಳಿಗಾಗಿ 1,737.68 ಕೋ.ರೂ.ಗಳನ್ನು ವ್ಯಯಿಸಿದೆ. ಒಟ್ಟು ವೆಚ್ಚದಲ್ಲಿ 884.45 ಕೋ.ರೂ.ಗಳನ್ನು ಪಕ್ಷದ ಸಾರ್ವತ್ರಿಕ ಪ್ರಚಾರಕ್ಕಾಗಿ ಮತ್ತು 853.23 ಕೋ.ರೂ.ಗಳನ್ನು ಅಭ್ಯರ್ಥಿ ಸಂಬಂಧಿತ ಖರ್ಚುಗಳಿಗಾಗಿ ವಿನಿಯೋಗಿಸಲಾಗಿದೆ.
ಬಿಜೆಪಿಯು ಸುಮಾರು 611.50 ಕೋ.ರೂ.ಗಳನ್ನು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳು,ಸಗಟು ಎಸ್ಎಂಎಸ್ ಪ್ರಚಾರಗಳು ಹಾಗೂ ಕೇಬಲ್,ವೆಬ್ಸೈಟ್ಗಳು ಮತ್ತು ಟಿವಿ ಚಾನೆಲ್ಗಳಲ್ಲಿ ಪ್ರಚಾರ ವಿಷಯಗಳು ಸೇರಿದಂತೆ ಮಾಧ್ಯಮ ಜಾಹೀರಾತುಗಳಿಗೆ,55.75 ಕೋ.ರೂ.ಗಳನ್ನು ಪೋಸ್ಟರ್ಗಳು,ಬ್ಯಾನರ್ಗಳು, ಹೋರ್ಡಿಂಗ್ಗಳು ಮತ್ತು ಧ್ವಜಗಳಂತಹ ಪ್ರಚಾರ ಸಾಮಗ್ರಿಗಳಿಗಾಗಿ ವೆಚ್ಚ ಮಾಡಿದೆ.
ವೇದಿಕೆಗಳು,ಧ್ವನಿವರ್ಧಕಗಳು,ಬ್ಯಾರಿಕೇಡ್ಗಳು ಮತ್ತು ವಾಹನಗಳಿಗೆ ವ್ಯವಸ್ಥೆಗಳು ಸೇರಿದಂತೆ ಸಾರ್ವಜನಿಕ ಸಭೆಗಳು,ಮೆರವಣಿಗೆಗಳು ಮತ್ತು ರ್ಯಾಲಿಗಳಿಗಾಗಿ ಬಿಜೆಪಿಯು 19.84 ಕೋ.ರೂ.ಗಳನ್ನು ವೆಚ್ಚ ಮಾಡಿದೆ.
ಪ್ರಚಾರ ಸಂಬಂಧಿತ ಪ್ರಯಾಣ ವೆಚ್ಚಗಳು ಬಿಜೆಪಿಯ ಬಜೆಟ್ನಲ್ಲಿ ಇನ್ನೊಂದು ಗಮನಾರ್ಹ ಭಾಗವಾಗಿದೆ.
ಪಕ್ಷದ ಕೇಂದ್ರ ಕಚೇರಿಯಿಂದ ಅನುಮೋದಿತ ತಾರಾ ಪ್ರಚಾರಕರ ಪ್ರಯಾಣ ವೆಚ್ಚಕ್ಕಾಗಿ 168.92 ಕೋ.ರೂ.ಗಳನ್ನು ಮತ್ತು ಪಕ್ಷದ ಇತರ ನಾಯಕರ ಪ್ರಯಾಣ ವೆಚ್ಚವಾಗಿ 2.53 ಕೋ.ರೂ.ಗಳನ್ನು ವ್ಯಯಿಸಲಾಗಿದೆ.
ಚುನಾವಣೆಯಲ್ಲಿ ಸತತ ಮೂರನೇ ಅವಧಿಗೆ ಅಧಿಕಾರವನ್ನು ಪಡೆದುಕೊಂಡ ಬಿಜೆಪಿಯು ಬೃಹತ್ ಜನಸಂಪರ್ಕ ಮತ್ತು ಪ್ರಚಾರ ಅಭಿಯಾನಗಳನ್ನು ಹೆಚ್ಚಾಗಿ ಅವಲಂಬಿಸಿತ್ತು ಎನ್ನುವುದು ಅದರ ವೆಚ್ಚಗಳ ಮಾದರಿಯು ಸ್ಪಷ್ಟಪಡಿಸಿದೆ.