ಲೋಕಸಭೆ ಚುನಾವಣೆ: ಭಾಗಲ್ಪುರ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಬಾಲಿವುಡ್ ನಟಿ ಕಣಕ್ಕೆ?
ಬಾಲಿವುಡ್ ನಟಿ ನೇಹಾ ಶರ್ಮಾ | Photo: X
ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಬಾಲಿವುಡ್ ನಟಿ ನೇಹಾ ಶರ್ಮಾ ರಾಜಕೀಯಕ್ಕೆ ಪ್ರವೇಶಿಸಬಹುದು ಎಂದು ಅವರ ತಂದೆ ಕಾಂಗ್ರೆಸ್ ನಾಯಕ ಅಜಯ್ ಶರ್ಮಾ ಸುಳಿವು ನೀಡಿದ್ದಾರೆ.
ಬಿಹಾರದ ಭಾಗಲ್ಪುರದ ಶಾಸಕರಾದ ಶರ್ಮಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಿತ್ರಪಕ್ಷಗಳೊಂದಿಗೆ ಪಕ್ಷದ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಭಾಗಲ್ಪುರ ಸ್ಥಾನವನ್ನು ಪಡೆದರೆ, ತಮ್ಮ ಮಗಳನ್ನು ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.
"ಕಾಂಗ್ರೆಸ್ಗೆ ಭಾಗಲ್ಪುರ ಸಿಗಬೇಕು, ನಾವು ಹೋರಾಡಿ ಸೀಟು ಗೆಲ್ಲುತ್ತೇವೆ, ಭಾಗಲ್ಪುರ ಕಾಂಗ್ರೆಸ್ಗೆ ಬಂದರೆ, ನನ್ನ ಮಗಳು ನೇಹಾ ಶರ್ಮಾ ಸ್ಪರ್ಧಿಸಬೇಕೆಂದು ನಾನು ಬಯಸುತ್ತೇನೆ, ಏಕೆಂದರೆ ನಾನು ಈಗಾಗಲೇ ಶಾಸಕನಾದ್ದೇನೆ. ಆದರೆ ಪಕ್ಷವು ನಾನು ಸ್ಪರ್ಧಿಸಬೇಕೆಂದು ಬಯಸಿದರೆ, ನಾನು ಸ್ಪರ್ಧಿಸುತ್ತೇನೆ" ಎಂದು ಅಜಯ್ ಶರ್ಮಾ ಹೇಳಿದ್ದಾರೆ.
ಇಮ್ರಾನ್ ಹಶ್ಮಿ ನಟನೆಯ 'ಕ್ರೂಕ್' ಚಿತ್ರದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನೇಹಾ ಶರ್ಮಾ ನಂತರ 'ತನ್ಹಾಜಿ: ದಿ ಅನ್ಸಂಗ್ ವಾರಿಯರ್', 'ಯಮ್ಲಾ ಪಗ್ಲಾ ದೀವಾನಾ 2', 'ತುಮ್ ಬಿನ್ 2' ಮತ್ತು 'ಮುಬಾರಕನ್' ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.
"ನಾವು ಬಿಹಾರದಿಂದ ಎನ್ಡಿಎ ಅನ್ನು ತೊಡೆದುಹಾಕುತ್ತೇವೆ, ಈ ಬಾರಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ತೆಗೆದುಹಾಕುವ ಜವಾಬ್ದಾರಿಯನ್ನು ಬಿಹಾರ ತೆಗೆದುಕೊಳ್ಳುತ್ತದೆ" ಎಂದು ಅಜಯ್ ಶರ್ಮಾ ಹೇಳಿದರು.
ಎಪ್ರಿಲ್ 19 ರಿಂದ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದರೊಂದಿಗೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ.