ಲೋಕಸಭಾ ಚುನಾವಣೆ: 79 ಸೀಟು ಫಲಿತಾಂಶಗಳಲ್ಲಿ ಅಕ್ರಮ?
ಅಂತಿಮ ಮತದಾನ ಪ್ರಮಾಣದಲ್ಲಿ ಏರಿಕೆಯು 79 ಕ್ಷೇತ್ರಗಳಲ್ಲಿ ಎನ್ಡಿಎ ಗೆಲುವಿನ ಅಲ್ಪಅಂತರಕ್ಕಿಂತ ಹೆಚ್ಚಾಗಿದೆ: ವೋಟ್ ಫಾರ್ ಡೆಮಾಕ್ರಸಿ
Photo: X (Twitter)/@JPNadda
ಹೊಸದಿಲ್ಲಿ: ಲೋಕಸಭಾ ಚುನಾವಣೆಗಳಲ್ಲಿ ಚುನಾವಣಾ ಆಯೋಗ (ಇಸಿಐ)ದ ತಾರತಮ್ಯದ ನಡವಳಿಕೆಯ ವಿರುದ್ಧ ಈಗಾಗಲೇ ಪ್ರತಿಪಕ್ಷಗಳು ಮತ್ತು ಪ್ರಜ್ಞಾವಂತ ನಾಗರಿಕರಿಂದ ಆರೋಪಗಳು ವ್ಯಕ್ತವಾಗಿವೆ. ಇದೀಗ ಮಹಾರಾಷ್ಟ್ರದ ನಾಗರಿಕ ವೇದಿಕೆ ವೋಟ್ ಫಾರ್ ಡೆಮಾಕ್ರಸಿ (ವಿಎಫ್ಡಿ) ಕೆಲವು ಸಂವೇದನಾಶೀಲ ಪ್ರತಿಪಾದನೆಗಳನ್ನು ಮಾಡುವ ಮೂಲಕ ಆರೋಪಗಳಿಗೆ ಇನ್ನಷ್ಟು ಇಂಬು ನೀಡಿದ್ದು, ಇದು ಚುನಾವಣಾ ಆಯೋಗದ ನಡವಳಿಕೆ ಕುರಿತು ಕಳವಳಗಳನ್ನು ಹೆಚ್ಚಿಸಬಹುದು ಎಂದು thewire.in ವರದಿ ಮಾಡಿದೆ.
ವಿಎಫ್ಡಿ ಚುನಾವಣಾ ಪ್ರಕ್ರಿಯೆಯಲ್ಲಿನ ಕೆಲವು ಲೋಪದೋಷಗಳನ್ನು ಎತ್ತಿ ತೋರಿಸಿರುವ ಜೊತೆಗೆ ಮೂರು ಮಹತ್ವದ ಅಂಶಗಳನ್ನು ಪ್ರತಿಪಾದಿಸಿದೆ.
ಮೊದಲನೆಯದಾಗಿ, ಚುನಾವಣಾ ಆಯೋಗ ಮತದಾನದ ದಿನಗಳಂದು ರಾತ್ರಿ ಎಂಟು ಗಂಟೆಯ ಸುಮಾರಿಗೆ ಹಂಚಿಕೊಂಡಿದ್ದ ಅಂದಾಜು ಮತದಾನ ಪ್ರಮಾಣ ಮತ್ತು ಅಂತಿಮ ಮತದಾನದ ಪ್ರಮಾಣಗಳ ನಡುವೆ 4,65,46,885 ಮತಗಳ ಅಂತರವಿದೆ ಎಂದು ವಿಎಫ್ಡಿ ತನ್ನ ವರದಿಯಲ್ಲಿ ಹೇಳಿದ್ದು, ಚಲಾವಣೆಗೊಂಡಿದ್ದ ಒಟ್ಟು ಮತಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವು ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆಯ ಕುರಿತು ಶಂಕೆಗಳನ್ನು ಮೂಡಿಸಿದೆ ಎಂದು ವಾದಿಸಿದೆ.
ಹಿಂದಿನ ಚುನಾವಣೆಗಳಲ್ಲಿ ಮತದಾನದ ದಿನಾಂಕಗಳಂದು ಮತದಾನದ ಅಂದಾಜು ಪ್ರಮಾಣ ಮತ್ತು ಅಂತಿಮ ಮತದಾನದ ಪ್ರಮಾಣಗಳ ನಡುವೆ ಹೆಚ್ಚಳ ಸುಮಾರು ಶೇ.1ರಷ್ಟಿದ್ದರೆ, 2024ರ ಲೋಕಸಭಾ ಚುನಾವಣೆಗಳ ಎಲ್ಲ ಏಳೂ ಹಂತಗಳಾದ್ಯಂತ ಇದು ಶೇ.3.2ರಿಂದ ಶೇ.6.32ರಷ್ಟಿದೆ. ಅಂತಿಮ ಮತದಾನ ಪ್ರಮಾಣದಲ್ಲಿ ಸಂಚಿತ ಸರಾಸರಿ ಹೆಚ್ಚಳ ಶೇ.4.72ರಷ್ಟಿದ್ದರೆ ಆಂಧ್ರಪ್ರದೇಶಲ್ಲಿ ಶೇ.12.54 ಮತ್ತು ಒಡಿಶಾದಲ್ಲಿ ಶೇ.12.48ರಷ್ಟು ಆಗಿದೆ ಎಂದು ಬೆಟ್ಟು ಮಾಡಿದೆ.
ಎರಡನೆಯದಾಗಿ ಅಂತಿಮ ಮತದಾನ ಪ್ರಮಾಣದಲ್ಲಿ ತೀವ್ರ ಏರಿಕೆಯು 15 ರಾಜ್ಯಗಳ 79 ಲೋಕಸಭಾ ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ ಮತ್ತು ಈ ಪೈಕಿ ಹಲವು ಕ್ಷೇತ್ರಗಳನ್ನು ಬಿಜೆಪಿ ಅಲ್ಪಮತಗಳ ಅಂತರದಿಂದ ಗೆದ್ದಿದೆ ಎಂದು ವಿಎಫ್ಡಿ ತನ್ನ ವರದಿಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ವಿಎಫ್ಡಿ ಸಂದೇಹಗಳನ್ನು ನಿವಾರಿಸುವಂತೆ ಮತ್ತು ಮತದಾನ ಪ್ರಮಾಣದಲ್ಲಿ ತೀವ್ರ ಹೆಚ್ಚಳಕ್ಕೆ ಪಾರದರ್ಶಕ ಕಾರಣಗಳನ್ನು ನೀಡುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಮೂರನೆಯದಾಗಿ 10 ರಾಜ್ಯಗಳ 18 ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳು ಅತ್ಯಲ್ಪ ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಎಲ್ಲ ಕ್ಷೇತ್ರಗಳಲ್ಲಿ ಮತದಾನದ ಮತ್ತು ಮತ ಎಣಿಕೆ ಸಂದರ್ಭಗಳಲ್ಲಿ ಅಕ್ರಮಗಳ ಆರೋಪಗಳು ಮತ್ತು ಇವಿಎಮ್ಗಳ ಅಸಮರ್ಪಕ ಕಾರ್ಯ ನಿರ್ವಹಣೆಯ ಬಗ್ಗೆ ನಾಗರಿಕ ಸಮಾಜದ ಸದಸ್ಯರು ಮತ್ತು ಪ್ರತಿಪಕ್ಷಗಳಿಂದ ಗಂಭೀರ ಕಳವಳಗಳು ವ್ಯಕ್ತವಾಗಿದ್ದವು ಎಂದು ವಿಎಫ್ಡಿ ಹೇಳಿದೆ.
ಮತದಾರರ ಮೇಲೆ ದಬ್ಬಾಳಿಕೆ, ಇವಿಎಂಗಳ ಅಸಮರ್ಪಕ ಕಾರ್ಯನಿರ್ವಹಣೆ, ಪ್ರತಿಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ಪ್ರಮುಖ ಅಧಿಕಾರಿಗಳ ವಿವಾದಾಸ್ಪದ ವರ್ಗಾವಣೆಗಳು,ಚುನಾವಣಾಧಿಕಾರಿಗಳ ದುರ್ವರ್ತನೆ,ಪ್ರತಿಪಕ್ಷಗಳ ದೂರುಗಳ ಕಡೆಗಣನೆ ಮತ್ತು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನೇಕ ವೀಕ್ಷಕರು ವ್ಯಕ್ತಪಡಿಸಿದ್ದ ಇಂತಹುದೇ ದೂರುಗಳನ್ನು ವರದಿಯು ಬೆಟ್ಟು ಮಾಡಿದೆ.
‘ಇಸಿಐನ ವಿಶ್ವಾಸಾರ್ಹತೆಯನ್ನು ನಾವು ಅನುಮಾನಿಸುವುದಿಲ್ಲ, ಆದರೆ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಅದರ ನಡವಳಿಕೆಯು ನಾಗರಿಕರು ಮತ್ತು ಮತದಾರರಾಗಿ ನಾವು ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತ ಫಲಿತಾಂಶದ ಬಗ್ಗೆ ಗಂಭೀರವಾಗಿ ಕಳವಳಗೊಳ್ಳುವಂತೆ ಮಾಡಿದೆ’ ಎಂದು ವರದಿಯು ಹೇಳಿದೆ.
ಮಾಜಿ ಐಎಎಸ್ ಅಧಿಕಾರಿ ಎಂ.ಜಿ.ದೇವಸಹಾಯಂ ಮತ್ತು ಸಾಮಾಜಿಕ ಕಾರ್ಯಕರ್ತ ಡಾ.ಪ್ಯಾರೇಲಾಲ್ ಗರ್ಗ ಅವರು ಈ ವರದಿಯನ್ನು ಬರೆದಿದ್ದಾರೆ. ವಿಎಫ್ಡಿ ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆಟಲ್ವಾಡ್,ಡಾಲ್ಫಿ ಡಿಸೋಜಾ,ಫಾ.ಫ್ರೇಝರ್ ಮಸ್ಕರನ್ಹಾಸ್ ಮತ್ತು ಖಲೀಲ್ ದೇಶಮುಖ ಅವರು ಸ್ಥಾಪಿಸಿರುವ ನಾಗರಿಕ ವೇದಿಕೆಯಾಗಿದೆ.