ಲೋಕಸಭಾ ಚುನಾವಣೆ | 2019ರ ಶೇ.25.64ರಿಂದ ಈ ವರ್ಷ ಶೇ.2.47ಕ್ಕೆ ಕುಸಿದ ಸಾಗರೋತ್ತರ ಮತದಾನ ಪ್ರಮಾಣ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ : ಸಾಗರೋತ್ತರ ಭಾರತೀಯರಲ್ಲಿ ಮತದಾನದ ಪ್ರಮಾಣವು 2019ರ ಲೋಕಸಭಾ ಚುನಾವಣೆಯಲ್ಲಿನ ಶೇ.25.64ರಿಂದ ಈ ವರ್ಷ ಶೇ.2.47ಕ್ಕೆ ಕುಸಿದಿದೆ ಎನ್ನುವುದನ್ನು ಚುನಾವಣಾ ಆಯೋಗವು ಅಪ್ಲೋಡ್ ಮಾಡಿರುವ ದತ್ತಾಂಶಗಳ ವಿಶ್ಲೇಷಣೆಯು ತೋರಿಸಿದೆ.
ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ 1,19,374 ನೋಂದಾಯಿತ ಸಾಗರೋತ್ತರ ಮತದಾರರಿದ್ದು, ಈ ಪೈಕಿ ಕೇವಲ 2,958 ಜನರು ತಮ್ಮ ಮತಗಳನ್ನು ಚಲಾಯಿಸಿದ್ದರು. 2019ರ ಚುನಾವಣೆಯಲ್ಲಿ 99,844 ನೋಂದಾಯಿತ ಸಾಗರೋತ್ತರ ಮತದಾರರ ಪೈಕಿ 25,606 ಜನರು ತಮ್ಮ ಮತಗಳನ್ನು ಚಲಾಯಿಸಿದ್ದರು. ಈ ಎರಡೂ ಚುನಾವಣೆಗಳಲ್ಲಿ ಹೆಚ್ಚಿನ ನೋಂದಾಯಿತ ಮತದಾರರು ಕೇರಳೀಯರಾಗಿದ್ದರು.
2024ರಲ್ಲಿ ಕೇರಳ ಮೂಲದ 89,839 ಸಾಗರೋತ್ತರ ಮತದಾರರ ಪೈಕಿ ಕೇವಲ 2,670(ಶೇ.2.97) ಜನರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. 2019ರಲ್ಲಿ ಈ ಸಂಖ್ಯೆಗಳು ಅನುಕ್ರಮವಾಗಿ 87,651 ಮತ್ತು 25,534(ಶೇ.29.13) ಆಗಿದ್ದವು.
ಇನ್ನೊಂದೆಡೆ ಈ ವರ್ಷ ಆಂಧ್ರಪ್ರದೇಶ ಮೂಲಕ ಸಾಗರೋತ್ತರ ಮತದಾರರ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿದೆ. 2024ರಲ್ಲಿ 7,927 ಮತದಾರರ ಪೈಕಿ 195 ಜನರು ಮತಗಳನ್ನು ಚಲಾಯಿಸಿದ್ದರೆ 2019ರಲ್ಲಿ ಈ ಸಂಖ್ಯೆಗಳು ಅನುಕ್ರಮವಾಗಿ 5,090 ಮತ್ತು 5 ಆಗಿದ್ದವು.
ಸಾಗರೋತ್ತರ ಭಾರತೀಯರು ಭಾರತದ ಪ್ರಜೆಗಳಾಗಿದ್ದರೆ, ಇತರ ಯಾವುದೇ ದೇಶದ ಪೌರತ್ವ ಪಡೆದುಕೊಂಡಿರದಿದ್ದರೆ ಮತ್ತು ನೋಂದಾಯಿಸಿಕೊಳ್ಳಲು ಅರ್ಹರಾಗಿದ್ದರೆ ಚುನಾವಣೆಗಳಲ್ಲಿ ಮತಗಳನ್ನು ಚಲಾಯಿಸಬಹುದು.