ಲೋಕಸಭಾ ಚುನಾವಣೆ: ರಾಯಬರೇಲಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆಯಿಲ್ಲ; ವರದಿ
ಪ್ರಿಯಾಂಕಾ ಗಾಂಧಿ | PC : PTI
ಹೊಸದಿಲ್ಲಿ: ಗಾಂಧಿ ಕುಟುಂಬದ ಭದ್ರನೆಲೆಗಳಾದ ಅಮೇಥಿ ಮತ್ತು ರಾಯಬರೇಲಿಗಳಲ್ಲಿ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲ ಮುಂದುವರಿದಿದೆ. ರಾಯಬರೇಲಿಯಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರ ಸ್ಪರ್ಧೆಯ ವ್ಯಾಪಕ ನಿರೀಕ್ಷೆಯಿದೆಯಾದರೂ ಆ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.
2004ರಿಂದ ರಾಯಬರೇಲಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಸೋನಿಯಾ ಗಾಂಧಿಯವರು ಅದನ್ನು ಇತ್ತೀಚಿಗೆ ತೆರವುಗೊಳಿಸಿದ್ದು, ಪುತ್ರಿ ಪ್ರಿಯಾಂಕಾ ಅಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ನಿರಂತರ ಊಹಾಪೋಹಗಳ ಜೊತೆಗೆ ಪಕ್ಷದಲ್ಲಿಯೂ ಅದಕ್ಕಾಗಿ ಕೂಗೆದ್ದಿದೆ.
ಪಕ್ಷದಲ್ಲಿಯ ಉನ್ನತ ಮೂಲಗಳ ಪ್ರಕಾರ ಪ್ರಿಯಾಂಕಾ ರಾಯಬರೇಲಿಯಿಂದ ಸ್ಪರ್ಧಿಸುವ ಸಾಧ್ಯತೆಯಿಲ್ಲ. ಅವರು ರಾಯಬರೇಲಿಯಿಂದ ಸ್ಪರ್ಧಿಸುತ್ತಿದ್ದರೆ ಕ್ಷೇತ್ರದಲ್ಲಿ ತನ್ನ ಚುನಾವಣಾ ಸಿದ್ಧತೆಯನ್ನು ಈಗಾಗಲೇ ಆರಂಭಿಸಿರುತ್ತಿದ್ದರು,ಅಮೇಥಿ ಮತ್ತು ರಾಯಬರೇಲಿ ಕ್ಷೇತ್ರಗಳಿಂದ ಯಾರು ಸ್ಪರ್ಧಿಸಬೇಕು ಎನ್ನುವುದನ್ನು ಗಾಂಧಿ ಕುಟುಂಬ ನಿರ್ಧರಿಸಲಿದೆ ಎಂದು ಈ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕರು ಹೇಳಿರುವಂತೆ ಪಕ್ಷಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪಕ್ಷಾಧ್ಯಕ್ಷ ರಾಹುಲ್ ಗಾಂಧಿಯವರ ಜೊತೆಗೆ ಪ್ರಿಯಾಂಕಾ ಪಕ್ಷದ ಮೂವರು ಅಗ್ರ ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದಾರೆ. ಶನಿವಾರ ಉತ್ತರಾಖಂಡದ ರಾಮನಗರ ಮತ್ತು ರೂರ್ಕಿಗಳಲ್ಲಿ ರ್ಯಾಲಿಗಳೊಂದಿಗೆ ಅವರು ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
2019ರ ಲೋಕಸಭಾ ಚುನಾವಣೆಗೆ ಮುನ್ನ ರಾಜಕೀಯಕ್ಕೆ ಧುಮುಕಿದ ಬಳಿಕ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪುನಃಶ್ಚೇತನಕ್ಕೆ ಪ್ರಯತ್ನಿಸಿದ್ದರು, ಆದರೆ ಹೇಳಿಕೊಳ್ಳುವಂತಹ ಯಶಸ್ಸನ್ನು ಕಂಡಿರಲಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಿಯಾಂಕಾ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು.
ಅತ್ತ ಅಮೇಥಿಯಿಂದ ಮರಳಿ ಸ್ಪರ್ಧಿಸುವ ಆಯ್ಕೆಯನ್ನು ರಾಹುಲ್ಗೆ ಮುಕ್ತವಾಗಿರಿಸಲಾಗಿದೆ ಎನ್ನಲಾಗಿದೆ. 2014ರಿಂದ ಸಂಸತ್ತಿನಲ್ಲಿ ಅಮೇಥಿಯನ್ನು ಪ್ರತಿನಿಧಿಸಿದ್ದ ಅವರು 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿಯೆದುರು ಸೋಲನ್ನಪ್ಪಿದ್ದರು. ಆ ವರ್ಷ ಕೇರಳದ ವಯನಾಡಿನಿಂದಲೂ ಚುನಾವಣಾ ಕಣಕ್ಕಿಳಿದಿದ್ದ ಅವರು ಅಲ್ಲಿ ಗೆಲುವು ಸಾಧಿಸಿದ್ದರು. ಈ ಸಲದ ಚುನಾವಣೆಯಲ್ಲಿ ಇರಾನಿ ಅಮೇಥಿಯಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಯಬರೇಲಿ ಮತ್ತು ಅಮೇಥಿ ಕ್ಷೇತ್ರಗಳಿಗೆ ಮಾತ್ರ ಕಾಂಗ್ರೆಸ್ ಇನ್ನೂ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ.
ಈ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳ ಘೋಷಣೆಯಲ್ಲಿ ವಿಳಂಬ ಕುರಿತು ಪ್ರಶ್ನೆಗೆ ಹಿರಿಯ ಕಾಂಗ್ರೆಸ್ ನಾಯಕರೋರ್ವರು, ನಾಮಪತ್ರಗಳ ಸಲ್ಲಿಕೆ ಎ.27ರಿಂದಷ್ಟೇ ಆರಂಭಗೊಳ್ಳಲಿದೆ, ಹೀಗಾಗಿ ಯಾವುದೇ ವಿಳಂಬವಾಗಿಲ್ಲ ಎಂದು ಉತ್ತರಿಸಿದರು. ವಯನಾಡಿನಲ್ಲಿ ಎ.26ರಂದು ಮತದಾನ ನಡೆಯಲಿದೆ ಎಂದು ಹೇಳಿದ ಅವರು ರಾಹುಲ್ ಅಮೇಥಿಯಿಂದ ಸ್ಪರ್ಧಿಸಬಹುದು ಎಂಬ ಸುಳಿವು ನೀಡಿದರು.
ಅಮೇಥಿ ಮತ್ತು ರಾಯಬರೇಲಿ ಕ್ಷೇತ್ರಗಳಲ್ಲಿ ಮೇ 20ರಂದು ಮತದಾನ ನಡೆಯಲಿದೆ.