ಲೋಕಸಭಾ ಚುನಾವಣೆ : ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಸಿದ್ಧ
ಸ್ಥಾನಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ : ಆಪ್
ಗೋಪಾಲ ರಾಯ್ | Photo: PTI
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಪಂಜಾಬ ಸೇರಿದಂತೆ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಪಕ್ಷವು ಸಿದ್ಧವಾಗಿದೆ ಮತ್ತು ಈವರೆಗಿನ ಚರ್ಚೆಗಳು ಸಕಾರಾತ್ಮಕವಾಗಿವೆ ಎಂದು ಆಪ್ ನ ದಿಲ್ಲಿ ಸಂಚಾಲಕ ಗೋಪಾಲ ರಾಯ್ ಅವರು ಮಂಗಳವಾರ ಇಲ್ಲಿ ತಿಳಿಸಿದರು.
ಆಪ್ ಮತ್ತು ಕಾಂಗ್ರೆಸ್ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಭಾಗವಾಗಿದ್ದು,ಸ್ಥಾನ ಹಂಚಿಕೆ ಕುರಿತು ಚರ್ಚಿಸಲು ಸೋಮವಾರ ಮಾತುಕತೆಯನ್ನು ಆರಂಭಿಸಿವೆ.
‘ಉಭಯ ಪಕ್ಷಗಳು ಮಾತುಕತೆಗಳನ್ನು ಆರಂಭಿಸಿವೆ.ದಿಲ್ಲಿ,ಪಂಜಾಬ, ಹರ್ಯಾಣ, ಗುಜರಾತ್ ಮತ್ತು ಗೋವಾಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯೊಂದಿಗೆ ಸ್ಪರ್ಧಿಸಲು ನಾವು ಸಿದ್ಧರಿದ್ದೇವೆ. ಈವರೆಗಿನ ಚರ್ಚೆಗಳು ಸಕಾರಾತ್ಮಕವಾಗಿವೆ ’ ಎಂದು ರಾಯ್ ಸುದ್ದಿಗೋಷ್ಠಿಯ ನೇಪಥ್ಯದಲ್ಲಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಈ ರಾಜ್ಯಗಳಲ್ಲಿ ನಿರ್ದಿಷ್ಟ ಸ್ಥಾನಗಳ ಬಗ್ಗೆ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.
ಆಪ್ ದಿಲ್ಲಿ ಮತ್ತು ಪಂಜಾಬಗಳಲ್ಲಿ ಅಧಿಕಾರದಲ್ಲಿದೆ. ಇವೆರಡೂ ರಾಜ್ಯಗಳಲ್ಲಿಯ ಕಾಂಗ್ರೆಸ್ ಘಟಕಗಳು ಆಪ್ ಜೊತೆಗೆ ಯಾವುದೇ ಮೈತ್ರಿಯನ್ನು ವಿರೋಧಿಸಿವೆ.
ಪಂಜಾಬಿನಲ್ಲಿ ಮೈತ್ರಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕಾಂಗ್ರೆಸ್ ಮತ್ತು ಆಪ್ ಬಹಿರಂಗವಾಗಿ ಪರಸ್ಪರರ ವಿರುದ್ಧ ವಾಗ್ದಾಳಿಗಳನ್ನು ನಡೆಸಿವೆ.
‘ಮೈತ್ರಿಯೊಂದಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ನಾವು ಬಯಸಿದ್ದೇವೆ, ಮುಂದಿನ ಸಭೆಯಲ್ಲಿ ಸ್ಥಾನಗಳ ಬಗ್ಗೆ ಮಾತುಕತೆ ನಡೆಯಲಿದೆ. ನಾವು ಮೈತ್ರಿಯಲ್ಲಿರುವಾಗ ಅಧಿಕೃತ ನಿಲುವನ್ನು ತಳೆಯಬೇಕಾಗುತ್ತದೆ. ಅದಕ್ಕಾಗಿ ಉಭಯ ಪಕ್ಷಗಳು ತಮ್ಮ ಸಿದ್ಧತೆಗಳನ್ನು ಮಾಡಿಕೊಂಡು ಬಳಿಕ ಚರ್ಚಿಸುತ್ತವೆ ’ ಎಂದೂ ರಾಯ್ ತಿಳಿಸಿದರು.