ಲೋಕಸಭಾ ಚುನಾವಣೆ: ಮಹಾರಾಷ್ಟ್ರದಲ್ಲಿ ಸೀಟುಹಂಚಿಕೆ ಫೈನಲ್; ಶಿಂಧೆ ಶಿವಸೇನೆ ಬಣಕ್ಕೆ 13, ಬಿಜೆಪಿಗೆ 31
Photo: PTI
ಮುಂಬೈ: ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಸೀಟುಹಂಚಿಕೆ ಸೂತ್ರ ಅಂತಿಮಪಡಿಸಲಾಗಿದ್ದು, 13 ಲೋಕಸಭಾ ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಪ್ರಕಟಿಸಿದ್ದಾರೆ. ಸಂಧಾನಸೂತ್ರದಂತೆ ಬಿಜೆಪಿ 31 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲಿದ್ದು, ನಾಲ್ಕು ಸ್ಥಾನಗಳನ್ನು ಎನ್ ಸಿಪಿಗೆ ಬಿಟ್ಟುಕೊಡಲಾಗಿದೆ ಎಂದು ಹೇಳಿದ್ದಾರೆ.
ಮುಂಬೈನ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ ಎಂದು ಶಿಂಧೆ ಬಣ ಪ್ರಕಟಿಸಿದೆ. ವಾಯವ್ಯ ಮುಂಬೈ ಕ್ಷೇತ್ರದ ಬದಲಾಗಿ ಶಿಂಧೆ ಬಣ ಥಾಣೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದೆ. ಅಜಿತ್ ಪವಾರ್ ಬಣಕ್ಕೆ ಪರ್ಭಾನಿ, ಬಾರಾಮತಿ, ಶಿರೂರು ಮತ್ತು ರಾಯಗಢ ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ.
ಶಿಂಧೆ ಶಿವಸೇನೆ ಬಣದ 13 ಸಂಸದರ ಪೈಕಿ 12 ಮಂದಿ ಮತ್ತೆ ಕಣಕ್ಕೆ ಧುಮುಕಲಿದ್ದಾರೆ. ವಾಯವ್ಯ ಮುಂಬೈ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಗಜಾನನ ಕೀರ್ತಿಕರ್ ಅವರನ್ನು ಮಹಾರಾಷ್ಟ್ರ ವಿಧಾನ ಪರಿಷತ್ತಿಗೆ ಕಳುಹಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಶಿಂಧೆ ಬಣದ ಮನವಿಯನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಬಿಜೆಪಿ ಕೇಂದ್ರ ನಾಯಕತ್ವ ಶಿಂಧೆ ಬಣಕ್ಕೆ ಕಡಿಮೆ ಸ್ಥಾನಗಳನ್ನು ನೀಡಲು ನಿರ್ಧರಿಸಿತ್ತು. ಹೆಚ್ಚಿನ ಮಂದಿ ಶಿಂಧೆ ಬಣದಿಂದ ಸ್ಪರ್ಧಿಸಲು ಇಚ್ಛಿಸಿದರಲ್ಲಿ ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸಲಿ ಎಂದು ಸಲಹೆ ಮಾಡಿತ್ತು. ಪಕ್ಷದ ಹಿರಿಯ ಮುಖಂಡರಾದ ಕೀರ್ತಿಕರ್ ಮತ್ತು ರಾಮದಾಸ್ ಕದಮ್ ಅವರು 22 ಸ್ಥಾನಗಳಿಗೆ ಬೇಡಿಕೆ ಮಂಡಿಸಿ ಶಿಂಧೆ ಮೇಲೆ ಒತ್ತಡ ತಂದಿದ್ದರು. ಬಿಜೆಪಿ ನಮ್ಮ ಕತ್ತು ಸೀಳುವಂತಿಲ್ಲ ಎಂದು ಕದಂ ಎಚ್ಚರಿಕೆ ನೀಡಿದ್ದರು.