ಲೋಕಸಭಾ ಚುನಾವಣೆ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ 11 ಸ್ಥಾನಗಳನ್ನು ಬಿಟ್ಟುಕೊಡಲು ಎಸ್ಪಿ ಒಪ್ಪಿಗೆ
Photo: PTI
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ 11 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಸಮಾಜವಾದಿ ಪಕ್ಷ (ಎಸ್ಪಿ)ವು ಶನಿವಾರ ಹೇಳಿದೆ. ಉಭಯ ಪಕ್ಷಗಳು ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಭಾಗವಾಗಿವೆ.
‘11 ಪ್ರಮುಖ ಕ್ಷೇತ್ರಗಳಲ್ಲಿ ಕಾಂಗ್ರೆಸ್ನೊಂದಿಗೆ ನಮ್ಮ ಮೈತ್ರಿಯು ಉತ್ತಮ ಆರಂಭವಾಗಿದೆ. ಈ ಪ್ರವೃತ್ತಿಯು ಗೆಲುವಿನ ಸಮೀಕರಣದೊಂದಿಗೆ ಮುಂದುವರಿಯಲಿದೆ ’ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶವು 80 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಇಂಡಿಯಾ ಮೈತ್ರಿಕೂಟದ ಇನ್ನೊಂದು ಪಕ್ಷವಾಗಿರುವ ಆರ್ಜೆಡಿಯೂ ಉತ್ತರ ಪ್ರದೇಶದಲ್ಲಿ ಎಸ್ಪಿ ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ. ಏಳು ಸ್ಥಾನಗಳಿಗಾಗಿ ಆರ್ಜೆಡಿ ಮತ್ತು ಎಸ್ಪಿ ನಡುವಿನ ಒಪ್ಪಂದ ಕಳೆದ ವಾರ ಅಂತಿಮಗೊಂಡಿದೆ.
‘ಅತ್ಯುತ್ತಮ ಮೈತ್ರಿಯು ರೂಪುಗೊಳ್ಳುತ್ತಿದೆ.ಇದು ಸ್ಥಾನಗಳ ಮೈತ್ರಿಯಲ್ಲ, ಗೆಲುವಿನ ಮೈತ್ರಿಯಾಗಿದೆ. ಸ್ಥಾನಗಳ ಸಂಖ್ಯೆ ಎಷ್ಟೂ ಆಗಿರಬಹುದು. ಮೈತ್ರಿಯು ಗೆಲುವಿನ ಸಾಧ್ಯತೆಯ ಮೇಲೆ ನಿಂತಿದೆ. ಯಾರು ಗೆಲ್ಲಬಹುದು ಎನ್ನುವುದನ್ನು ನಮ್ಮ ಸ್ಥಾನ ಹಂಚಿಕೆ ಕಾರ್ಯತಂತ್ರವು ಆಧರಿಸಿದೆ ’ಎಂದು ಯಾದವ್ ಶುಕ್ರವಾರ ಹೇಳಿದ್ದರು.
ಮಾತುಕತೆ ಇನ್ನೂ ನಡೆಯುತ್ತಿದೆ:ಕಾಂಗ್ರೆಸ್
ಪಕ್ಷದ ಹಿರಿಯ ನಾಯಕ ಅಶೋಕ ಗೆಹ್ಲೋಟ್ ಮತ್ತು ಎಸ್ಪಿ ವರಿಷ್ಠ ಅಖಿಲೇಶ್ ಯಾದವ್ ನಡುವೆ ರಚನಾತ್ಮಕ ಸ್ಥಾನ ಹಂಚಿಕೆ ಮಾತುಕತೆಗಳು ನಡೆಯುತ್ತಿವೆ ಮತ್ತು ಹಂಚಿಕೆ ಸೂತ್ರವು ಅಂತಿಮಗೊಂಡಾಗ ಆ ಬಗ್ಗೆ ತಿಳಿಸಲಾಗುವುದು ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಲೋಕಸಭಾ ಚುನಾವಣೆಗಾಗಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 11 ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಅಖಿಲೇಶ್ ಟ್ವೀಟ್ನ ಬೆನ್ನಲ್ಲೇ ಕಾಂಗ್ರೆಸ್ನ ಈ ಹೇಳಿಕೆ ಹೊರಬಿದ್ದಿದೆ.
ಯಾದವ್ ಹೇಳಿಕೆಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು,‘ಸ್ಥಾನ ಹಂಚಿಕೆ ಕುರಿತು ಗೆಹ್ಲೋಟ್ ಮತ್ತು ಯಾದವ್ ನಡುವೆ ಧನಾತ್ಮಕ ಮತ್ತು ರಚನಾತ್ಮಕ ಮಾತುಕತೆಗಳು ನಡೆಯುತ್ತಿವೆ. ಹಂಚಿಕೆ ಸೂತ್ರ ಅಂತಿಮಗೊಂಡ ಬಳಿಕ ನಾವು ನಿಮಗೆ ಮಾಹಿತಿ ನೀಡುತ್ತೇವೆ ’ಎಂದು ಉತ್ತರಿಸಿದರು.