ಲೋಕಸಭಾ ಚುನಾವಣೆ: 12 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ (ಮಾ.28) ನಾಮಪತ್ರ ಸಲ್ಲಿಕೆ ಆರಂಭ
Image source: Election commission of India
ಹೊಸದಿಲ್ಲಿ: ಎರಡನೆ ಹಂತದ ಚುನಾವಣೆ ನಡೆಯಲಿರುವ 12 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಇಂದಿನಿಂದ (ಗುರುವಾರ) ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ.
ಎಪ್ರಿಲ್ 26ರಂದು ನಡೆಯಲಿರುವ ಎರಡನೆಯ ಹಂತದ ಚುನಾವಣೆಗೆ ಚುನಾವಣಾ ಆಯೋಗವು ಇಂದು ಬೆಳಗ್ಗೆ ರಾಷ್ಟ್ರಪತಿಗಳ ಪರವಾಗಿ ಅಧಿಸೂಚನೆ ಹೊರಡಿಸಿದೆ.
ಎಪ್ರಿಲ್ 4 ನಾಮಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಎಪ್ರಿಲ್ 5ರಂದು ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಎಪ್ರಿಲ್ 6ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ.
ಈ ಚುನಾವಣಾ ಹಂತದಲ್ಲಿ ಔಟರ್ ಮಣಿಪುರ ಲೋಕಸಭಾ ಕ್ಷೇತ್ರದ ಒಂದು ಭಾಗದಲ್ಲೂ ಮತದಾನ ನಡೆಯಲಿದೆ. ಔಟರ್ ಮಣಿಪುರ ಕ್ಷೇತ್ರದ ಮತದಾನದ ಕುರಿತ ಅಧಿಸೂಚನೆಯನ್ನು ಮಾರ್ಚ್ 20ರಂದು ಪ್ರಕಟವಾಗಿದ್ದ ಮೊದಲ ಹಂತದ ಚುನಾವಣೆಯ ಗೆಝೆಟ್ ಅಧಿಸೂಚನೆಯಲ್ಲಿ ಸೇರ್ಪಡೆ ಮಾಡಲಾಗಿತ್ತು.
ಔಟರ್ ಮಣಿಪುರ ಲೋಕಸಭಾ ಕ್ಷೇತ್ರದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎಪ್ರಿಲ್ 19ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಉಳಿದ 13 ವಿಧಾನಸಭಾ ಕ್ಷೇತ್ರದಲ್ಲಿ ಎಪ್ರಿಲ್ 26ರಂದು ಮತದಾನ ನಡೆಯಲಿದೆ.
ಎರಡನೆಯ ಹಂತದಲ್ಲಿ ಅಸ್ಸಾಂ, ಬಿಹಾರ್, ಛತ್ತೀಸ್ ಗಢ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಇದರೊಂದಿಗೆ ಔಟರ್ ಮಣಿಪುರ ಲೋಕಸಭಾ ಕ್ಷೇತ್ರಕ್ಕೂ ಚುನಾವಣೆ ನಡೆಯಲಿದೆ.