ಲೋಕಸಭಾ ಚುನಾವಣೆ: 48 ಗಂಟೆಗಳಲ್ಲಿ ಮತದಾನದ ಅಂಕಿಅಂಶ ಬಿಡುಗಡೆ ಕುರಿತು ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ಸುಪ್ರೀಂ | PC : PTI
ಹೊಸದಿಲ್ಲಿ: ಲೋಕಸಭಾ ಚುನಾವಣೆಗಳ ಪ್ರತಿಯೊಂದು ಹಂತ ಮುಕ್ತಾಯಗೊಂಡ 48 ಗಂಟೆಗಳಲ್ಲಿ ಮತಗಟ್ಟೆವಾರು ಮತದಾನದ ಅಂಕಿಅಂಶಗಳನ್ನು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶನ ಕೋರಿ ಎನ್ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಲ್ಲಿಸಿರುವ ಅರ್ಜಿಗೆ ಒಂದು ವಾರದೊಳಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಆಯೋಗಕ್ಕೆ ಸೂಚಿಸಿದೆ.
ಅರ್ಜಿಯ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು ಸಂಜೆ 6:30ಕ್ಕೆ ಸಮಾವೇಶಗೊಂಡಿತ್ತು. ಅರ್ಜಿಗೆ ಉತ್ತರಿಸಲು ಚುನಾವಣಾ ಆಯೋಗಕ್ಕೆ ಸಾಕಷ್ಟು ಕಾಲಾವಕಾಶ ನೀಡಬೇಕಿದೆ ಎಂದು ಹೇಳಿದ ನ್ಯಾ.ಚಂದ್ರಚೂಡ್ ಅವರು,ಅರ್ಜಿಯ ವಿಚಾರಣೆಯನ್ನು ಆರನೇ ಹಂತದ ಚುನಾವಣೆಗಳ ಮುನ್ನಾ ದಿನವಾದ ಮೇ 24ಕ್ಕೆ ನಿಗದಿಗೊಳಿಸಿದರು.
ಇದಕ್ಕೂ ಮುನ್ನ ಎಡಿಆರ್ ಪರವಾಗಿ ವಿಷಯವನ್ನು ಉಲ್ಲೇಖಿಸಿದ್ದ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ಅವರು,ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದ್ದರು.