ಲೋಕಸಭಾ ಚುನಾವಣೆಗಳು: 1 ಮತ್ತು 2ನೇ ಹಂತದ ಅಂತಿಮ ಮತದಾನ ಪ್ರಮಾಣದ ಅಂಕಿಅಂಶಗಳನ್ನು ಇನ್ನೂ ಪ್ರಕಟಿಸದ ಚುನಾವಣಾ ಆಯೋಗ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: 2024ನೇ ಸಾಲಿನ ಲೋಕಸಭಾ ಚುನಾವಣೆಗಳ ಮೊದಲ ಹಂತ ಎ.19ರಂದು ಮತ್ತು ಎರಡನೇ ಹಂತ ಎ.26ರಂದು ನಡೆದಿವೆ, ಆದರೆ ಎರಡೂ ಹಂತಗಳಲ್ಲಿ ಮತದಾನದ ಅಂತಿಮ ಅಂಕಿಅಂಶಗಳನ್ನು ಚುನಾವಣಾ ಆಯೋಗವು ಇನ್ನೂ ಬಿಡುಗಡೆಗೊಳಿಸಿಲ್ಲ. ಲಭ್ಯವಿರುವ ಮಾಹಿತಿ ಎಂದರೆ ಆಯಾ ಮತದಾನ ದಿನಾಂಕಗಳಂದು ಸಂಜೆ ಏಳು ಗಂಟೆಗೆ ಆಯೋಗವು ಬಿಡುಗಡೆಗೊಳಿಸಿದ ‘ಅಂದಾಜು ಪ್ರಮಾಣ’ ಮಾತ್ರ.
ಅಂದಾಜು ಪ್ರಮಾಣ ಎ.19ಕ್ಕೆ ಶೇ.60 ಮತ್ತು ಎ.26ಕ್ಕೆ ಶೇ.60.96 ಆಗಿತ್ತು.
‘ಅಂತಿಮ ಮತದಾನದ ಪ್ರಮಾಣ ಮೊದಲ ಹಂತದಲ್ಲಿ ಶೇ.66.14 ಮತ್ತು ಎರಡನೇ ಹಂತದಲ್ಲಿ ಶೇ.66.76 ಆಗಿದ್ದು, ಇವುಗಳನ್ನು ತಾಳೆ ಹಾಕಿದ ತಕ್ಷಣ ನಮ್ಮ ಜಾಲತಾಣದಲ್ಲಿ ಪ್ರಕಟಿಸುತ್ತೇವೆ’ ಎಂದು ಆಯೋಗದ ಹಿರಿಯ ಅಧಿಕಾರಿಯೋರ್ವರು ಸುದ್ದಿಸಂಸ್ಥೆ thehindubusinessline.comಗೆ ತಿಳಿಸಿದ್ದಾರೆ. ಆದರೆ ಮತದಾನದ ಅಂತಿಮ ಅಂಕಿಸಂಖ್ಯೆಗಳು ಈವರೆಗೆ ಜಾಲತಾಣದಲ್ಲಿ ಪ್ರಕಟಗೊಂಡಿಲ್ಲ.
ಇದು ಕೇವಲ ಜಾಲತಾಣದಿಂದ ಕಾಣೆಯಾಗಿರುವ ಮತದಾನದ ಅಂಕಿಅಂಶಗಳ ಕುರಿತಲ್ಲ, ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಸಂಖ್ಯೆಯೂ ಕಾಣೆಯಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿರುವ thehindubusinessline.com, ಪ್ರತಿ ಕ್ಷೇತ್ರದಲ್ಲಿಯ ಮತದಾರರ ಸಂಖ್ಯೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದಾಗ ಸಿಕ್ಕಿದ್ದು ಉತ್ತರ ಪ್ರದೇಶದಂತಹ ಕೆಲವು ಆಯ್ದ ರಾಜ್ಯಗಳಲ್ಲಿಯ ಬೂತ್ವಾರು ಮತದಾರರ ಪಟ್ಟಿಗಳು ಮಾತ್ರ. ಒಡಿಶಾ, ಬಿಹಾರ ಅಥವಾ ದಿಲ್ಲಿಗೂ ಈ ದತ್ತಾಂಶ ಲಭ್ಯವಿಲ್ಲ. ಬಿಹಾರ ಅಥವಾ ಒಡಿಶಾದಲ್ಲಿಯ ಮತದಾರರ ಸಂಖ್ಯೆಯನ್ನು ಕಂಡುಕೊಳ್ಳಲು ಪ್ರಯತ್ನಿಸಿದಾಗ ಮಾಹಿತಿಯನ್ನು ಒದಗಿಸಬೇಕಾದ ಅಂತಿಮ ಪುಟದಲ್ಲಿ ದೋಷ ಸಂದೇಶವು ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದೆ.
ಈವರೆಗಿನ ಅಂದಾಜು ಮತದಾನದ ಪ್ರಮಾಣವು 2019ರ ಲೋಕಸಭಾ ಚುನಾವಣೆಗಳಲ್ಲಿ ಕಂಡುಬಂದಿದ್ದಕ್ಕಿಂತ ಕಡಿಮೆಯಾಗಿದೆ ಎಂದು ಸುದ್ದಿಜಾಲತಾಣ ʼದಿ ವೈರ್ʼ ವರದಿ ಮಾಡಿದೆ.
ಈ ಕುಸಿತವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ ಅವರಂತಹ ಮೋದಿ ಸರಕಾರದ ಟೀಕಾಕಾರರು ಎನ್ಡಿಎಯೇತರ ಪಕ್ಷಗಳಿಗಿಂತ ಬಿಜೆಪಿ ನೇತೃತ್ವದ ಎನ್ಡಿಎ ತೆಕ್ಕೆಯಲ್ಲಿರುವ ಕ್ಷೇತ್ರಗಳಲ್ಲಿ ಮತದಾನದ ಕುಸಿತವು ಹೆಚ್ಚಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ ಸುಡುಬಿಸಿಲು ಮತದಾನದ ಪ್ರಮಾಣ ಕುಸಿಯಲು ಕಾರಣವಾಗಿದೆ ಎಂದು ನಂಬಿಕೊಂಡಿರುವ ಬಿಜೆಪಿ ಬೆಂಬಲಿಗರು, ಮೋದಿಯವರ ಪುನರಾಯ್ಕೆ ಪೂರ್ವ ನಿಗದಿತವಾಗಿರುವುದರಿಂದ ಹತಾಶರಾಗಿರುವ ಮೋದಿ ಸರಕಾರದ ವಿರೋಧಿಗಳು ಮತದಾನ ಮಾಡಿರಲಿಕ್ಕಿಲ್ಲ ಎಂದು ಭಾವಿಸಿದ್ದಾರೆ ಎಂದು ವರದಿಯು ಹೇಳಿದೆ.
ಲೋಕಸಭಾ ಚುನಾವಣೆಯನ್ನು ಸಾಮಾನ್ಯ ವಹಿವಾಟು, ಮಾಮೂಲು ವ್ಯವಹಾರದಂತೆ ನಡೆಸಲಾಗುತ್ತಿದೆ. ಖುದ್ದು ಪ್ರಧಾನಿಯವರ ನೇತೃತ್ವದಲ್ಲಿ ಬಿಜೆಪಿ ನಾಯಕರು ನಿರ್ಭೀತಿಯಿಂದ ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಭಾಷಣಗಳನ್ನು ಮಾಡುತ್ತಿದ್ದಾರೆ ಮತ್ತು ಈ ಬಗ್ಗೆ ಚುನಾವಣಾ ಆಯೋಗವು ನಿರ್ಲಿಪ್ತವಾಗಿದೆ. ಕೆಲವು ಪ್ರಾದೇಶಿಕ ನಾಯಕರನ್ನು ಹೊರತುಪಡಿಸಿ ಪ್ರತಿಪಕ್ಷಗಳು ತಮ್ಮ ಕಾರ್ಯಕರ್ತರನ್ನು ಕ್ರೋಡೀಕರಿಸಲು ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸಲು ಹೆಣಗಾಡುತ್ತಿವೆ. ಇದು ಮೋದಿ ಆಡಳಿತವು ಎಸಗಿರುವ ಅತಿರೇಕಗಳಿಗೆ ವಿಶ್ವಾಸಾರ್ಹವಾದ ಸವಾಲು ಇಲ್ಲ ಎಂಬ ಭಾವನೆಯನ್ನು ಹುಟ್ಟುಹಾಕಿದೆ.
ಸಮಾನ ಸ್ಪರ್ಧಾಕಣದ ಕೊರತೆ ಎದ್ದು ಕಾಣುತ್ತಿದೆ. ಅದು ರಹಸ್ಯವಾಗಿ ಉಳಿದಿಲ್ಲ. 18ನೇ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳು ಪ್ರಾಬಲ್ಯ ಪಡೆದಿವೆ ಮತ್ತು ಪುನರಾವರ್ತಿತ ಪ್ರಚಾರದೊಂದಿಗೆ ಹತಾಶೆ ಕಂಡು ಬರುತ್ತಿದೆ. ಇದು ಮೋದಿ ಸರಕಾರದ ಬೆಂಬಲಿಗರು ಮತ್ತು ವಿರೋಧಿಗಳಲ್ಲಿ ಮತದಾನದ ಪ್ರಮಾಣ ಕುಸಿಯಲು ನಿಜವಾದ ಕಾರಣವಾಗಿರಬಹುದು.