ಲೋಕಸಭಾ ಚುನಾವಣೆ: ಬಿಜೆಪಿಯ ʼಸಂಕಲ್ಪ ಪತ್ರʼದಲ್ಲೇನಿದೆ?
PC : PTI
ಹೊಸದಿಲ್ಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕೇವಲ ಒಂದು ವಾರ ಇರುವಂತೆಯೇ ಬಿಜೆಪಿ ರವಿವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ‘ಒಂದು ದೇಶ ಒಂದು ಚುನಾವಣೆ’, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಉದ್ಯೋಗ ಅವಕಾಶಗಳ ಸೃಷ್ಟಿಗೆ ತನ್ನ ಪ್ರಣಾಳಿಕೆಯಲ್ಲಿ ಒತ್ತು ನೀಡಿದೆ.
ಹೊಸದಿಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ‘ಸಂಕಲ್ಪ ಪತ್ರ’ವನ್ನು ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಣಾಳಿಕೆಯಲ್ಲಿ ನೀಡಲಾದ ಪ್ರತಿಯೊಂದು ಗ್ಯಾರಂಟಿಯನ್ನು ಜಾರಿಗೊಳಿಸಲು ಬಿಜೆಪಿ ಶ್ರಮಿಸಲಿದೆಯೆಂದು ಹೇಳಿದರು.
ಸರಕಾರದ ಯೋಜನೆಗಳ ಫಲಾನುಭವಿಗಳಾದ ಗರೀಬ್,ಯುವ, ಅನ್ನದಾತ ಹಾಗೂ ನಾರಿ ಶಕ್ತಿ (ಗ್ಯಾನ್), ಈ ನಾಲ್ಕು ಗುಂಪುಗಳ ಪ್ರತಿನಿಧಿಗಳಿಗೆ ಪ್ರಧಾನಿ ಪ್ರಣಾಳಿಕೆಯ ಪ್ರತಿಗಳನ್ನು ಹಸ್ತಾಂತರಿಸಿದರು.
ಹಾಲಿ NDA ಸರಕಾರದ ಸಾಧನೆಗಳ ಸಮಗ್ರ ಸಾಧನೆಗಳನ್ನು ಕೂಡಾ ಪ್ರಣಾಳಿಕೆಯಲ್ಲಿ ಪಟ್ಟಿ ಮಾಡಲಾಗಿದೆ. 2047ರೊಳಗೆ ವಿಕಸಿತ ಭಾರತ ನಿರ್ಮಾಣದ ದೂರದರ್ಶಿತ್ವವನ್ನು ಕೂಡಾ ರೂಪಿಸಲಾಗಿದೆ ಎಂದವರು ಹೇಳಿದರು.
‘‘ನಮ್ಮ ಪಾಲಿಕೆ ಪಕ್ಷಕ್ಕಿಂತಲೂ ದೇಶ ದೊಡ್ಡದು. ನಾರಿಶಕ್ತಿ ವಂದನ್ ಮಸೂದೆಯು ಈಗ ಕಾನೂನಾಗಿ ಜಾರಿಗೊಂಡಿದೆ ಹಾಗೂ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದೆ ಮತ್ತು ಸಮಾನ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದರು.
ಬಿಜೆಪಿಯು ಸುಧಾರಣೆ, ಕಾರ್ಯನಿರ್ವಹಣೆ ಹಾಗೂ ಪರಿವರ್ತನೆಯ ತತ್ವಗಳನ್ನು ತನ್ನ ಮೂರನೇ ಅವಧಿಯಲ್ಲಿ ಅಳವಡಿಸಿಕೊಂಡು ಮುನ್ನಡೆಯಲಿದೆ ಎಂದು ಅವರು ಹೇಳಿದರು. ಪಕ್ಷದ ಪ್ರಣಾಳಿಕೆಯಲ್ಲಿ ವಿವರಿಸಿದಂತೆ ಬಿದೆಪಿ ದೇಶಾದ್ಯಂತ ರೈಲು ಜಾಲವನ್ನು ಬಲಪಡಿಸಲಿದೆ ಎಂದರು. ದೇಶದ ಪ್ರತಿ ಮೂಲೆಮೂಲೆಗೂ ವಂದೇ ಭಾರತ್ರೈಲು ವಿಸ್ತರಣೆಯಾಗಲಿದೆ ಎಂದರು.
ಭಾರತವನ್ನು ಆಹಾರ ಸಂಸ್ಕರಣೆಯ ಕೇಂದ್ರವಾಗಿ ಮಾಡುವ ತನ್ನ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಮುಂದಿನ ಅವಧಿಗೆ ಮತ್ತೆ ಅಧಿಕಾರಕ್ಕೇರಿದಲ್ಲಿ ಕೆಲವೊಂದು ಬಲವಾದ ನಿರ್ಧಾರಗಳನ್ನು ಜಾರಿಗೊಳಿಸುವ ಸುಳಿವು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಬಿಜೆಪಿ ಎಂದಿಗೂ ಹಿಂದೆ ಸರಿಯದು ಎಂದರು.
ಕಳೆದ ಒಂದು ದಶಕದಲ್ಲಿ ಸುಮಾರು 10 ಕೋಟಿ ಮಹಿಳೆಯರನ್ನು ಸ್ವಸಹಾಯ ಗುಂಪುಗಳ ಜೊತೆ ಸಂಪರ್ಕಿಸಲಾಗಿದೆ. 3 ಲಕ್ಷ ಗ್ರಾಮಾಂತರ ಮಹಿಳೆಯರನ್ನು ಬೆಂಬಲಿಸುವ ಉದ್ದೇಶವನ್ನು ಕೂಡಾ ಬಿಜೆಪಿ ಹೊಂದಿದೆ. ಬಿಜೆಪಿಯ ಸಂಕಲ್ಪ ಪತ್ರವು ಯುವಭಾರತದ ನೂತನ ಆಶೋತ್ತರಗಳ ಪ್ರತಿಬಿಂಬಲವಾಗಿದೆ ಎಂದು ಮೋದಿ ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಭಾರತದ 25 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಬಿಜೆಪಿ ಫಲಿತಾಂಶ ಕೇಂದ್ರೀತ ಕಾರ್ಯನಿರ್ವಹಣೆಗೆ ಇದು ಬಲವಾದ ಸಾಕ್ಷಿಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.
ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನ ಮತದಾರರನ್ನು ಮನವೊಲಿಸಲು ಹರಸಾಹಸ ನಡೆಸುತ್ತಿರುವ ಬಿಜೆಪಿಯು, ತಮಿಳಿನ ಸಂತಕವಿ ತಿರುವಳ್ಳುವರ್ ಅವರ ಗೌರವಾರ್ಥವಾಗಿ ಹಾಗೂ ತಮಿಳುಭಾಷೆಯನ್ನು ಉತ್ತೇಜಿಸಲು ಜಗತ್ತಿನಾದ್ಯಂತ ಸಾಂಸ್ಕೃತಿಕ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ.
‘ಒಂದು ದೇಶ ಒಂದು ಚುನಾವಣೆ’ ದೃಢಸಂಕಲ್ಪವನ್ನು ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಬಿಜೆಪಿಯು, ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಜಾರಿಗೆ ತರುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದೆ.
‘ಸಂಕಲ್ಪ ಪತ್ರ’ದ ಹೈಲೈಟ್ಸ್
1. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಲಿಂಗಾಂತರಿಗಳು ಆಯುಷ್ಮಾನ್ ಭಾರತ ಯೋಜನೆಯ ವ್ಯಾಪ್ತಿಗೆ.
2. ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಮುಂದಿನ ಐದು ವರ್ಷಗಳ ಕಾಲ ಉಚಿತ ಪಡಿತರ.
3. ಮೂರು ಕೋಟಿ ಮನೆಗಳ ನಿರ್ಮಾಣ ಹಾಗೂ ಎಲ್ಲಾ ಕುಟುಂಬಗಳಿಗೆ ಉಚಿತ ಪೈಪ್ಲೈನ್ ಅಡುಗೆ ಅನಿಲ ಪೂರೈಕೆ. ಪಿಎಂ ಸೂರ್ಯ ಘರ್ ಮುಫ್ತ್ ಬಿಜಲಿ ಯೋಜನೆಯಡಿ ಬಡಕುಟುಂಬಗಳಿಗೆ ಉಚಿತ ವಿದ್ಯುತ್.
4. ಸಮಾನ ನಾಗರಿಕ ಸಂಹಿತೆ ಹಾಗೂ ಒಂದು ರಾಷ್ಟ್ರ ಒಂದು ಚುನಾವಣೆ ಜಾರಿ.
5. 3 ಕೋಟಿ ಮಹಿಳೆಯರನ್ನು ಲಕ್ಷಾಧೀಶ ದೀದಿಯರನ್ನಾಗಿ ಮಾಡುವ ಗುರಿ.
6. ಪಿಎಂ ಆವಾಸ್ ಯೋಜನೆಯಡಿ ಭಿನ್ನ ಸಾಮರ್ಥ್ಯದವರಿಗೆ ಆದ್ಯತೆ.
7. ಸ್ತನ ಕ್ಯಾನ್ಸರ್, ಗರ್ಭನಾಳದ ಕ್ಯಾನ್ಸರ್, ರಕ್ತಹೀನತೆ ಹಾಗೂ ಒಸ್ಟಿಯೊಪೊರೊಸಿಸ್ ತಡೆ ಹಾಗೂ ನಿಯಂತ್ರಣಕ್ಕಾಗಿನ ಆರೋಗ್ಯ ಸೇವೆಗಳ ವಿಸ್ತರಣೆ.
8. ದೇಶದಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಕಠಿಣ ಕಾನೂನುಜಾರಿ.
9. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಹೆಚ್ಚಿಸಲು ಬಿಜೆಪಿಯ ಚುನಾವಣಾ ಪ್ರಣಾಳಿಕೆ ಭರವಸೆ. ಕೃಷಿ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕಾಗಿ ಕೃಷಿ ಮೂಲಸೌಕರ್ಯ ಮಿಶನ್.
10. ಭಾರತವನ್ನು ಜಗತ್ತಿನಲ್ಲೇ ಮೂರನೇ ಬೃಹತ್ಆರ್ಥಿಕ ಶಕ್ತಿಯಾಗಿ ರೂಪಿಸುವ ಖಾತರಿ. ಪ್ರಸಕ್ತ ಭಾರತವು ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿದೆ.