ತಿಹಾರ್ ಜೈಲಿನಿಂದ ಬಿಡುಗಡೆಯಾದ ಲೋಕಸಭಾ ಸಂಸದ ಇಂಜಿನಿಯರ್ ರಶೀದ್
ಇಂಜಿನಿಯರ್ ರಶೀದ್ | PTI
ಹೊಸದಿಲ್ಲಿ: ಉಗ್ರರಿಗೆ ಹಣಕಾಸು ಒದಗಿಸಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಬಾರಾಮುಲ್ಲಾ ಸಂಸದ ಇಂಜಿನಿಯರ್ ರಶೀದ್ ಅವರಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಲು ಅಕ್ಟೋಬರ್ 2ರವರೆಗೆ ಜಾಮೀನು ಮಂಜೂರು ಮಾಡಿದ ಮರುದಿನವಾದ ಇಂದು (ಬುಧವಾರ) ಅವರು ತಿಹಾರ್ ಜೈಲಿನಿಂದ ಬಿಡುಗಡೆಗೊಂಡರು.
ಜೈಲಿನಿಂದ ಬಿಡುಗಡೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಜನರಿಗಾಗಿ ಹೋರಾಡುವುದನ್ನು ಮುಂದುವರಿಸಲಿದ್ದೇನೆ ಎಂದು ಘೋಷಿಸಿದರು. ಜೈಲಿನಿಂದ ಹೊರ ಬಂದ ರಶೀದ್ ಅವರನ್ನು ಅವರ ಪುತ್ರ ಹಾಗೂ ಬೆಂಬಲಿಗರು ಸ್ವಾಗತಿಸಿದರು.
2017ರ ಭಯೋತ್ಪಾದನಾ ಕೃತ್ಯಕ್ಕೆ ಹಣಕಾಸು ಒದಗಿಸಿದ ಆರೋಪದಲ್ಲಿ ರಾಷ್ಟ್ರೀಯ ತನಿಖಾ ದಳವು ಯುಎಪಿಎ ಕಾಯ್ದೆಯಡಿ ಬಂಧಿಸಿದ ನಂತರ ಇಂಜಿನಿಯರ್ ರಶೀದ್ ಎಂದೇ ಜನಪ್ರಿಯರಾಗಿರುವ ಶೇಖ್ ಅಬ್ದುಲ್ ರಶೀದ್ ಅವರು 2019ರಿಂದ ಜೈಲಿನಲ್ಲಿದ್ದರು.
“ಅವರು ಸಂಜೆ 4.15ಕ್ಕೆ ಜೈಲಿನಿಂದ ಬಿಡುಗಡೆಗೊಂಡರು” ಎಂದು ಹಿರಿಯ ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂಜಿನಿಯರ್ ರಶೀದ್ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಪರಾಭವಗೊಳಿಸಿದ್ದರು. ಅವರ ಅವಾಮಿ ಇತ್ತೆಹಾದ್ ಪಕ್ಷವು ಈ ಬಾರಿಯ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.