ಆದಾಯ ತೆರಿಗೆ ಮಸೂದೆಯನ್ನು ಪರಿಶೀಲಿಸಲು ಲೋಕಸಭಾ ಸಮಿತಿ ರಚನೆ

Photo credit: PTI
ಹೊಸದಿಲ್ಲಿ: 2025 ರ ಆದಾಯ ತೆರಿಗೆ ಮಸೂದೆಯನ್ನು ಪರಿಶೀಲಿಸಲು ಬಿಜೆಪಿ ಸಂಸದ ಬೈಜಯಂತ್ ಜಯ್ ಪಾಂಡಾ ಅವರ ಅಧ್ಯಕ್ಷತೆಯಲ್ಲಿ ಲೋಕಸಭೆಯ ಆಯ್ಕೆ ಸಮಿತಿಯನ್ನು ಶುಕ್ರವಾರ ರಚಿಸಲಾಯಿತು.
ಸಮಿತಿಯು ಆಡಳಿತಾರೂಢ NDA ಮೈತ್ರಿಕೂಟದ 17 ಸಂಸದರು ಸೇರಿದಂತೆ ಒಟ್ಟು 31 ಸಂಸದರನ್ನು ಹೊಂದಿರಲಿದೆ. ಇದರಲ್ಲಿ ಬಿಜೆಪಿಯ 14 ಮತ್ತು TDP, JD(U) ಮತ್ತು ಶಿವಸೇನೆಯ ತಲಾ ಒಬ್ಬರು ಸಂಸದರು ಇರಲಿದ್ದಾರೆ.
ವಿರೋಧ ಪಕ್ಷಗಳಿಂದ ಕಾಂಗ್ರೆಸ್ನ ಆರು, ಸಮಾಜವಾದಿ ಪಕ್ಷದ ಇಬ್ಬರು ಮತ್ತು DMK, TMC, ಶಿವಸೇನೆ (UBT), NCP (SP) ಮತ್ತು RSP ಯಿಂದ ತಲಾ ಒಬ್ಬರು ಸೇರಿದಂತೆ 13 ಸಂಸದರನ್ನು ಸಮಿತಿಯಲ್ಲಿರಲಿದ್ದಾರೆ . ರಿಚರ್ಡ್ ವನ್ಲಾಲ್ಮಂಗೈಹಾ ಎಂಬ ಒಬ್ಬ ಸಂಸದ ಮಿಜೋರಾಂನ ಆಡಳಿತಾರೂಢ ಜೋರಮ್ ಪೀಪಲ್ಸ್ ಮೂವ್ಮೆಂಟ್ನಿಂದ ಸಮಿತಿಗೆ ನೇಮಕವಾಗಿದ್ದಾರೆ.
ಪಾಂಡಾ ಜೊತೆಗೆ, ಬಿಜೆಪಿಯಿಂದ ನಿಶಿಕಾಂತ್ ದುಬೆ, ಪಿ.ಪಿ. ಚೌಧರಿ, ಭರ್ತೃಹರಿ ಮಹ್ತಾಬ್ ಮತ್ತು ಅನಿಲ್ ಬಲುನಿ ಸೇರಿದ್ದಾರೆ.
ವಿರೋಧ ಪಕ್ಷದ ಸಂಸದರಲ್ಲಿ ಕಾಂಗ್ರೆಸ್ನ ದೀಪೇಂದರ್ ಸಿಂಗ್ ಹೂಡಾ, ತೃಣಮೂಲ ಕಾಂಗ್ರೆಸ್ ನ ಮಹುವಾ ಮೊಯಿತ್ರಾ, ಎನ್ಸಿಪಿ (ಎಸ್ಪಿ) ಯ ಸುಪ್ರಿಯಾ ಸುಳೆ ಮತ್ತು ಆರ್ಎಸ್ಪಿಯ ಎನ್.ಕೆ. ಪ್ರೇಮಚಂದ್ರನ್ ಸೇರಿದ್ದಾರೆ.
ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆ ಸಮಿತಿಯು ತನ್ನ ವರದಿಯನ್ನು ಸಲ್ಲಿಸಬೇಕು. ಈಗ ನಡೆಯುತ್ತಿರುವ ಬಜೆಟ್ ಅಧಿವೇಶನ ಏಪ್ರಿಲ್ 4 ರಂದು ಕೊನೆಗೊಳ್ಳಲಿದ್ದು, ಮುಂಗಾರು ಅಧಿವೇಶನವು ಜುಲೈ ಮೂರನೇ ವಾರದಲ್ಲಿ ಪ್ರಾರಂಭವಾಗಬಹುದು.
ಗುರುವಾರ ಲೋಕಸಭೆಯಲ್ಲಿ ಮಸೂದೆಯನ್ನು ಪರಿಚಯಿಸುವಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕರಡು ಕಾನೂನನ್ನು ಸದನದ ಆಯ್ಕೆ ಸಮಿತಿಗೆ ಉಲ್ಲೇಖಿಸುವಂತೆ ಸ್ಪೀಕರ್ ಓಂ ಬಿರ್ಲಾ ಬಿರ್ಲಾ ಅವರನ್ನು ಒತ್ತಾಯಿಸಿದರು.