ಬ್ರಿಕ್ಸ್ ಸಂಸದೀಯ ಸಮಾವೇಶ | ಭಾರತೀಯ ನಿಯೋಗಕ್ಕೆ ಸ್ಪೀಕರ್ ಓಂ ಬಿರ್ಲಾ ನೇತೃತ್ವ
ಓಂ ಬಿರ್ಲಾ | PTI
ಹೊಸದಿಲ್ಲಿ: ಗುರುವಾರ ರಷ್ಯಾದ ಸೈಂಟ್ ಪೀಟರ್ಸ್ಬರ್ಗ್ನಲ್ಲಿ ಆಯೋಜನೆಗೊಂಡಿರುವ 10ನೇ ಬ್ರಿಕ್ಸ್ ಸಂಸದೀಯ ಸಮಾವೇಶದಲ್ಲಿ ಭಾರತದ ನಿಯೋಗದ ನೇತೃತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಹಿಸಲಿದ್ದಾರೆ ಎಂದು ವರದಿಯಾಗಿದೆ.
ಈ ನಿಯೋಗವು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್, ರಾಜ್ಯಸಭಾ ಸದಸ್ಯ ಶಂಭು ಶರಣ್ ಪಟೇಲ್, ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಹಾಗೂ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋದಿಯನ್ನು ಒಳಗೊಂಡಿದೆ.
"ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಯಲ್ಲಿ ಬಹುಪಕ್ಷೀಯತೆಯನ್ನು ಸದೃಢಗೊಳಿಸುವಲ್ಲಿ ಸಂಸತ್ತುಗಳ ಪಾತ್ರ" ಎಂಬುದು 10 ಬ್ರಿಕ್ಸ್ ಸಂಸದೀಯ ಸಮಾವೇಶದ ಘೋಷ ವಾಕ್ಯವಾಗಿದೆ.
ಈ ಸಮಾವೇಶದಲ್ಲಿ ಬ್ರಿಕ್ಸ್ ದೇಶಗಳ ಸಂಸತ್ತಿನ ಮುಖ್ಯಾಧಿಕಾರಿಗಳು ಹಾಗೂ ಆಹ್ವಾನಿತ ದೇಶಗಳಾದ ಅಝರ್ಬೈಜಾನ್, ಅರ್ಮೇನಿಯ, ಬೆಲಾರಸ್, ಕಝಕಸ್ತಾನ್, ಕಿರ್ಗಿಝ್ ರಿಪಬ್ಲಿಕ್, ತಜಿಕಿಸ್ತಾನ್, ಉಝ್ಬೆಕಿಸ್ತಾನ್ ಹಾಗೂ ತುರ್ಕ್ಮೆನಿಸ್ತಾನ್ ಪ್ರತಿನಿಧಿಗಳು ಮತ್ತು ಅಂತರ್ ಸಂಸದೀಯ ಒಕ್ಕೂಟದ ಅಧ್ಯಕ್ಷ ತುಲಿಯ ಆಕ್ಸನ್ ಭಾಗವಹಿಸಲಿದ್ದಾರೆ.