ಕೇಂದ್ರ ಸಚಿವರಿಗೆ ಲೋಕಸಭೆ ಸ್ಪೀಕರ್ ನೀತಿಪಾಠ; ಕಾರಣವೇನು ಗೊತ್ತೇ?
Photo: PTI
ಹೊಸದಿಲ್ಲಿ: ಕೇಂದ್ರ ಸಚಿವರೊಬ್ಬರು ಶುಕ್ರವಾರ ಸ್ಪೀಕರ್ ಓಂ ಬಿರ್ಲಾ ಅವರ ಕೆಂಗಣ್ಣಿಗೆ ಗುರಿಯಾದ ಸ್ವಾರಸ್ಯಕರ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು. ಪ್ರಶ್ನೋತ್ತರ ಅವಧಿಯಲ್ಲಿ ಜೇಬಿನಲ್ಲಿ ಕೈಇಟ್ಟುಕೊಂಡು ಹರಟುತ್ತಿದ್ದ ಸಚಿವರನ್ನು ಸ್ಪೀಕರ್ ಎಚ್ಚರಿಸಬೇಕಾಯಿತು.
"ಮಾನ್ಯ ಸಚಿವರೇ, ದಯವಿಟ್ಟು ನಿಮ್ಮ ಕೈಗಳನ್ನು ಜೇಬಿನಿಂದ ತೆಗೆಯಿರಿ" ಎಂದು ಸ್ಪೀಕರ್ ಖಾರವಾಗಿ ನುಡಿದರು. ಜೇಬಿನಲ್ಲಿ ಕೈ ಹಾಕಿಕೊಂಡು ಸದನಕ್ಕೆ ಬರದಂತೆ ಬಿರ್ಲಾ ಎಲ್ಲ ಸದಸ್ಯರಿಗೆ ಮನವಿ ಮಾಡಿಕೊಂಡರು. ಸದನದಲ್ಲಿ ಸದಸ್ಯರು ವಿಷಯ ಪ್ರಸ್ತಾಪಿಸುತ್ತಿರುವ ಸಂದರ್ಭದಲ್ಲಿ ಎದುರು ಸಾಲಿನ ಸದಸ್ಯರ ಎದುರು ಅಡ್ಡಾಡದಂತೆಯೂ ತಾಕೀತು ಮಾಡಿದರು.
"ಮಾನ್ಯ ಸದಸ್ಯರೊಬ್ಬರು ಮಾತನಾಡುತ್ತಿರುವಾಗ, ಯಾರೂ ಅವರ ಎದುರು ಅಡ್ಡಾಡಬಾರದು ಮತ್ತು ಅವರ ಎದುರಿನ ಆಸನದಲ್ಲಿ ಕುಳಿತುಕೊಳ್ಳಬಾರದು. ನೀವು ಅವರ ಹಿಂದೆ ಕುಳಿತುಕೊಳ್ಳಿ" ಎಂದು ಸಲಹೆ ನೀಡಿದರು.
ಸಂಸದೀಯ ನಿಯಮಗಳ ಪ್ರಕಾರ, ಸದನದಲ್ಲಿ ಸದಸ್ಯರು ಮಾತನಾಡುವ ವೇಳೆ ಅವರ ನಡುವೆ ಅಡ್ಡಾಡುವುದನ್ನು ಸಭಾಧ್ಯಕ್ಷರು ಸಂಸದೀಯ ಸಭ್ಯತೆಯ ಉಲ್ಲಂಘನೆ ಎಂದು ಪರಿಗಣಿಸುತ್ತಾರೆ.