ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಲೋಕಪಾಲ ಆದೇಶ
ಮಹುವಾ ಮೊಯಿತ್ರಾ | Photo: X\ @MahuaMoitra
ಹೊಸದಿಲ್ಲಿ : ಮಾಜಿ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ ಸಂಸತ್ ನಲ್ಲಿ ಪ್ರಶ್ನೆ ಕೇಳಲು ಹಣ ಸ್ವೀಕರಿಸಿದ್ದಾರೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಿ ಆರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಲೋಕಪಾಲ ಮಂಗಳವಾರ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ನಿರ್ದೇಶನ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣಾನಗರ ಕ್ಷೇತ್ರವನ್ನು ಪ್ರತಿನಿಧಿಸಿರುವ ತೃಣಮೂಲ ಕಾಂಗ್ರೆಸ್ ನಾಯಕಿ ಮೊಯಿತ್ರಾರನ್ನು ಡಿಸೆಂಬರ್ 8ರಂದು ಸಂಸತ್ ನಿಂದ ಉಚ್ಚಾಟಿಸಲಾಗಿತ್ತು. ಅವರ ವಿರುದ್ಧ ಸಂಸದೀಯ ಸಮಿತಿಯೊಂದು ಸಲ್ಲಿಸಿದ ವರದಿಯ ಆಧಾರದಲ್ಲಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಮೊಯಿತ್ರಾರನ್ನು ಉಚ್ಚಾಟಿಸುವ ನಿರ್ಣಯವನ್ನು ಸಂಸತ್ ನಲ್ಲಿ ಮಂಡಿಸಿದ್ದರು. ಅದನ್ನು ಸಂಸತ್ ಅಂಗೀಕರಿಸಿತ್ತು.
ಮೊಯಿತ್ರಾ ತನ್ನ ಸಂಸದೀಯ ವೆಬ್ ಸೈಟ್ ನ ಲಾಗಿನ್ ವಿವರಗಳನ್ನು ದುಬೈಯಲ್ಲಿ ನೆಲೆಸಿರುವ ಉದ್ಯಮಿ ದರ್ಶನ್ ಹೀರಾನಂದನಿಗೆ ನೀಡಿದ್ದಾರೆ ಮತ್ತು ಅವರ ಪರವಾಗಿ ಪ್ರಶ್ನೆ ಕೇಳುವುದಕ್ಕೆ ಪ್ರತಿಯಾಗಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂಬುದಾಗಿ ಲೋಕಸಭೆಯ ನೀತಿ ಸಮಿತಿಯು ತನ್ನ ವರದಿಯಲ್ಲಿ ಹೇಳಿತ್ತು.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ್ ದೇಹದ್ರಾಯ್, ಮೊಯಿತ್ರಾ ವಿರುದ್ಧ ಅಕ್ಟೋಬರ್ ನಲ್ಲಿ ದೂರುಗಳನ್ನು ಸಲ್ಲಿಸಿದ್ದರು.
ಮಂಗಳವಾರ, ದೇಹದ್ರಾಯ್ ನವೆಂಬರ್ ನಲ್ಲಿ ಸಲ್ಲಿಸಿದ ದೂರನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಅಭಿಲಾಶಾ ಕುಮಾರಿ ಹಾಗೂ ಸದಸ್ಯರಾದ ಅರ್ಚನಾ ರಾಮಸುಂದರಮ್ ಮತ್ತು ಮಹೇಂದ್ರ ಸಿಂಗ್ ಅವರನ್ನೊಳಗೊಂಡ ಲೋಕಪಾಲದ ಪೂರ್ಣ ಪೀಠವು ಈ ತೀರ್ಪು ನೀಡಿದೆ.
ಇದಕ್ಕೂ ಮೊದಲು, ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಲೋಕಪಾಲವು ಸಿಬಿಐಗೆ ಸೂಚನೆ ನೀಡಿತ್ತು. ಡಿಸೆಂಬರ್ 22ರಂದು, ಸಿಬಿಐಯು ಮೂರು ವಾರಗಳ ವಿಸ್ತರಣೆ ಕೋರಿತ್ತು. ಆಗ ಫೆಬ್ರವರಿ 15ರವರೆಗೆ ವಿಸ್ತರಣೆ ನೀಡಲಾಗಿತ್ತು.