ಪುತ್ರಿಯನ್ನು ಕಳೆದುಕೊಂಡು ಲಕ್ಷಾಂತರ ಮಂದಿಯನ್ನು ಗಳಿಸಿದೆ: ಕೊಲ್ಕತ್ತಾ ಅತ್ಯಾಚಾರ ಸಂತ್ರಸ್ತೆಯ ತಂದೆ
PC:x.com/ketan72
ಕೊಲ್ಕತ್ತಾ: "ನಾನು ಪುತ್ರಿಯನ್ನು ಕಳೆದುಕೊಂಡೆ; ಆದರೆ ಲಕ್ಷಾಂತರ ಮಂದಿಯನ್ನು ಗಳಿಸಿದೆ"- ಕೊಲ್ಕತ್ತಾದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಸಂತ್ರಸ್ತೆಯ ತಂದೆಯ ಮನದಾಳದ ಮಾತುಗಳಿವು.
'ರಿಕ್ಲೇಮ್ ದ ನೈಟ್' ಪ್ರತಿಭಟನೆ ವಿಶ್ವವ್ಯಾಪಿಯಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪುತ್ರಿಯ ಹೆಸರು ಬಳಸದಂತೆ ಮತ್ತು ಮೃತದೇಹದ ಭಯಾನಕ ಚಿತ್ರಗಳನ್ನು ಪ್ರಕಟಿಸದಂತೆ ಮನವಿ ಮಾಡಿದರು. ಇದು ತಪ್ಪು ಸಂದೇಶವನ್ನು ಸಾರುತ್ತದೆ ಎಂದು ಅಭಿಪ್ರಾಯಪಟ್ಟರು.
ಘಟನೆ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಮಮತಾ ಬ್ಯಾನರ್ಜಿ ನಮಗೆ ಹೇಳಿದ್ದರು. ಅದು ತ್ವರಿತವಾಗಿ ಆಗುವ ಸಲುವಾಗಿ ನಾವು ಕೋರ್ಟ್ ಮೊರೆ ಹೋದೆವು ಎಂದು ತಂದೆ ವಿವರಿಸಿದರು.
ಆದರೆ ವೈದ್ಯೆಯ ತಾಯಿ ಪೊಲೀಸರ ವಿರುದ್ಧ ಹೊಸ ಆರೋಪ ಮಾಡಿದ್ದಾರೆ. "ಅಂದು ಬೆಳಿಗ್ಗೆ 10.53ಕ್ಕೆ ಆಸ್ಪತ್ರೆಯ ಸಹಾಯಕ ಅಧೀಕ್ಷಕರು ಕರೆ ಮಾಡಿ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮಾಹಿತಿ ನೀಡಿದರು. ಅಲ್ಲಿಗೆ ತಲುಪಿದ ತಕ್ಷಣ ನಾವು ಮೃತದೇಹ ನೋಡಲು ಸಾಧ್ಯವಾಗಲಿಲ್ಲ. 3 ಗಂಟೆಗೆ ನಾವು ಆಕೆಯನ್ನು ನೋಡಲು ಸಾಧ್ಯವಾಯಿತು. ನಮ್ಮ ಮೇಲೆ ತೀವ್ರ ಒತ್ತಡ ಇತ್ತು. ಕೆಲವರು ಆಕೆಯ ಕಾರನ್ನು ಹಾನಿಗೊಳಿಸುವ ಪ್ರಯತ್ನವನ್ನೂ ಮಾಡಿದರು. ನಮ್ಮ ಮನೆಗೆ ಮುಖ್ಯಮಂತ್ರಿ ಬಂದಾಗ, ಬಂಧಿತ ಆರೋಪಿ ಸಂಜಯ್ ರಾಯ್ ಷಾಮೀಲಾಗಿರುವ ಸಾಧ್ಯತೆ ಇಲ್ಲವೆಂದು ಹೇಳಿದ್ದೆವು" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ದೇಶಾದ್ಯಂತ ಮತ್ತು ವಿಶ್ವದ ಹಲವೆಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ತಾಯಿ, "ಈ ಚಳವಳಿ ಮತ್ತು ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಮ್ಮ ಪ್ರೀತಿಯನ್ನು ನಾವು ಎಲ್ಲ ಪ್ರತಿಭಟನಾಕಾರರಿಗೆ ಕಳುಹಿಸುತ್ತಿದ್ದೇವೆ. ಅವರೆಲ್ಲರನ್ನೂ ನಮ್ಮ ಮಕ್ಕಳು ಎಂದು ನಾವು ಭಾವಿಸುತ್ತೇವೆ" ಎಂದು ಪ್ರತಿಕ್ರಿಯಿಸಿದರು.