ಬಲವಂತದ ಮತಾಂತರ, ‘ಲವ್ಜಿಹಾದ್’ ವಿರುದ್ಧ ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಕಾನೂನು?
7 ಸದಸ್ಯರ ಸಮಿತಿ ರಚನೆ

ಸಾಂದರ್ಭಿಕ ಚಿತ್ರ
ಮುಂಬೈ: ಬಲವಂತದ ಮತಾಂತರ ಹಾಗೂ ತಥಾಕಥಿತ ‘ಲವ್ ಜಿಹಾದ್’ ಪ್ರಕರಣಗಳ ವಿರುದ್ಧ ಕಾನೂನೊಂದನ್ನು ರೂಪಿಸುವುದಕ್ಕಾಗಿ ಮಹಾರಾಷ್ಟ್ರ ಸರಕಾರವು ಏಳು ಮಂದಿ ಸದಸ್ಯರ ಸಮಿತಿಯೊಂದನ್ನು ರಚಿಸಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಂಜಯ್ ವರ್ಮಾ ನೇತೃತ್ವದ ಸಮಿತಿಯು ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತ ವ್ಯವಹಾರಗಳು, ಕಾನೂನು ಮತ್ತು ನ್ಯಾಯಾಂಗ, ಸಾಮಾಜಿಕ ನ್ಯಾಯ, ವಿಶೇಷ ನೆರವು ಹಾಗೂ ಗೃಹ ಸಚಿವಾಲಯದಂತಹ ಪ್ರಮುಖ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸಮಿತಿಯು ಒಳಗೊಂಡಿರುವುದು.
ಬಲವಂತದ ಮತಾಂತರ ಹಾಗೂ ಲವ್ ಜಿಹಾದ್ ಗೆ ಸಂಬಂಧಿಸಿದ ದೂರುಗಳ ನಿರ್ವಹಣೆಗೆ ರೂಪಿಸಬೇಕಾದ ಕ್ರಮಗಳನ್ನು ಸಮಿತಿಯು ಸರಕಾರಕ್ಕೆ ಸೂಚಿಸಲಿದೆ ಎಂದು ಶುಕ್ರವಾರ ರಾತ್ರಿ ಪ್ರಕಟಿಸಲಾದ ಸರಕಾರಿ ನಿರ್ಣಯ (ಜಿಆರ್)ವು ತಿಳಿಸಿದೆ. ಇತರ ರಾಜ್ಯದಲ್ಲಿ ಜಾರಿಯಲ್ಲಿರುವ ಇಂತಹ ಕಾನೂನುಗಳನ್ನು ಸಮಿತಿಯು ಪರಿಶೀಲಿಸಲಿದೆ ಹಾಗೂ ಈ ನಿಟ್ಟಿನಲ್ಲಿ ಕಾನೂನಿನ ನಿಬಂಧನೆಗಳನ್ನು ಅದು ಸರಕಾರಕ್ಕೆ ಶಿಫಾರಸು ಮಾಡಲಿದೆಯೆಂದು ಮೂಲಗಳು ತಿಳಿಸಿವೆ.
ಸಮಿತಿಯನ್ನು ಸ್ಥಾಪಿಸುವ ಮಹಾರಾಷ್ಟ್ರ ಸರಕಾರದ ನಿರ್ಧಾರಕ್ಕೆ ಪ್ರತಿಪಕ್ಷಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿವಾಹ ಅಥವಾ ಪ್ರೇಮವು ವೈಯಕ್ತಿಕ ವಿಚಾರವಾಗಿದೆಯೆಂದು ಎನ್ಸಿಪಿ (ಶರದ್ ಪವಾರ್) ನಾಯಕಿ ಸುಪ್ರಿಯಾ ಸುಲೆ ಹೇಳಿದ್ದಾರೆ.
‘‘ ನೈಜ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ನಾನು ಸರಕಾರವನ್ನು ಆಗ್ರಹಿಸುತ್ತಿದ್ದೇನೆ. ಪ್ರಧಾನಿ ಮೋದಿಯವರು ಅಮೆರಿಕದಿಂದ ಈಗಷ್ಟೇ ಹಿಂತಿರುಗಿದ್ದಾರೆ ಮತ್ತು ಅಮೆರಿಕವು ಹೊಸ ಸುಂಕಗಳನ್ನು ಹೇರಿದ್ದು, ನಮ್ಮ ದೇಶದ ಮೇಲೆ ಪರಿಣಾಮ ಬೀರಲಿದೆ. ಇಂತಹ ವಿಷಯಗಳ ಬಗ್ಗೆ ಸರಕಾರವು ಜಾಗೃತವಾಗಬೇಕಾಗಿದೆ ಹಾಗೂ ಆರ್ಥಿಕ ಪರಿಸ್ಥಿತಿಯ ಗಮನಹರಿಸಬೇಕಾಗಿದೆ’’ ಎಂದವರು ಹೇಳಿದ್ದಾರೆ.