ಸಂಗಾತಿಯನ್ನು ಹುಡುಕುತ್ತಾ ಮಹಾರಾಷ್ಟ್ರದಿಂದ 300 ಕಿ.ಮೀಟರ್ ದೂರ ಪ್ರಯಾಣಿಸಿದ ಗಂಡು ಹುಲಿ!
ಸಾಂದರ್ಭಿಕ ಚಿತ್ರ (PTI)
ಹೈದರಾಬಾದ್: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಿನ್ವಾಟ್ ನ ಅರಣ್ಯದಿಂದ ಲವ್ಲೋರ್ನ್ ಜಾನಿ ಹೆಸರಿನ ಆರರಿಂದ ಎಂಟು ವರ್ಷದೊಳಗಿನ ಗಂಡು ಹುಲಿ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಉಟ್ನೂರ್ ಗೆ ಸಂಗಾತಿಯನ್ನು ಹುಡುಕುತ್ತಾ 300 ಕಿ.ಮೀಟರ್ ಗೂ ಹೆಚ್ಚು ಪ್ರಯಾಣಿಸಿದೆ. ಈ ಕುರಿತು ಸುದ್ದಿಯಾಗುತ್ತಿದ್ದಂತೆ ಜನರು ಕುತೂಹಲವನ್ನು ವ್ಯಕ್ತಪಡಿಸಿದ್ದಾರೆ.
ಅದಿಲಾಬಾದ್ ಜಿಲ್ಲಾ ಅರಣ್ಯಾಧಿಕಾರಿ ಪ್ರಶಾಂತ್ ಬಾಜಿರಾವ್ ಪಾಟೀಲ್, ಗಂಡು ಹುಲಿಯೊಂದು ಸಂಗಾತಿಯ ಹುಡುಕಾಟದ ಪಯಣದ ಸುದ್ದಿಯನ್ನು ದೃಢಪಡಿಸಿದ್ದಾರೆ. ಗಂಡು ಹುಲಿಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಇಂತಹ ದೀರ್ಘ ಪ್ರಯಾಣ ಪ್ರಾರಂಭಿಸುತ್ತವೆ. ಸಂಯೋಗದ ಋತುವಿನಲ್ಲಿ ಪ್ರಾಣಿಗಳು ಸಂಗಾತಿಯನ್ನು ಹುಡುಕಿಕೊಂಡು ಈ ರೀತಿ ಪ್ರಯಾಣ ಮಾಡುತ್ತದೆ ಎಂದು ಹೇಳಿದ್ದಾರೆ.
ಜಾನಿ ಹೆಸರಿನ ಹುಲಿಯು ಅಕ್ಟೋಬರ್ ಮೂರನೇ ವಾರದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಆದಿಲಾಬಾದ್ ನ ಬೋತ್ ಮಂಡಲದ ಅರಣ್ಯದಲ್ಲಿ ಆರಂಭದಲ್ಲಿ ಕಾಣಿಸಿಕೊಂಡ ಈ ಹುಲಿಯು ನಿರ್ಮಲ್ ಜಿಲ್ಲೆಯ ಕುಂತಲ, ಸಾರಂಗಪುರ, ಮಮದ ಮತ್ತು ಪೆಂಬಿ ಮಂಡಲಗಳ ಮೂಲಕ ಉಟ್ನೂರ್ ಗೆ ತೆರಳಿ ಹೈದರಾಬಾದ್-ನಾಗ್ಪುರ NH-44 ಹೆದ್ದಾರಿಯನ್ನು ದಾಟಿ ಈಗ ತಿರಿಯಾನಿ ಅರಣ್ಯ ಪ್ರದೇಶದತ್ತ ಸಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಗಂಡು ಹುಲಿಗಳು ಹೆಣ್ಣು ಹುಲಿಗಳ ವಿಶೇಷವಾದ ಪರಿಮಳ ಗ್ರಹಿಸಿಕೊಂಡು 100 ಕಿ.ಮೀ ದೂರದವರೆಗೆ ತೆರಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹುಲಿಗಳು ಬೇಟೆಗಾಗಿ ಕಾಯುತ್ತವೆ ಮತ್ತು ಹೊಸ ಪ್ರದೇಶಗಳಿಗೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಜಾನಿಯ ಪ್ರಯಾಣ ಕೇವಲ ಪ್ರೀತಿಯಲ್ಲ, ಈ ಹುಲಿಯು ಇದುವರೆಗೆ ಐದು ಜಾನುವಾರುಗಳನ್ನು ಕೊಂದಿದೆ ಮತ್ತು ಹಸುಗಳನ್ನು ಬೇಟೆಯಾಡಲು ಮೂರು ವಿಫಲ ಪ್ರಯತ್ನಗಳನ್ನು ಮಾಡಿದೆ. ಇತ್ತೀಚೆಗಷ್ಟೇ ಈ ಹುಲಿಯು ಉಟ್ನೂರಿನ ಲಾಲ್ತೆಕ್ಡಿ ಗ್ರಾಮದ ಬಳಿ ರಸ್ತೆ ದಾಟುತ್ತಿರುವ ದೃಶ್ಯ ಕಂಡುಬಂದಿದೆ. ಹುಲಿಗಳು ಸಂಗಾತಿಯನ್ನು ಹುಡುಕುವುದರಿಂದ ಮನುಷ್ಯರಿಗೆ ಅಪಾಯವಾಗುವುದಿಲ್ಲ. ಈ ಬಗ್ಗೆ ಭಯಭೀತರಾಗಬೇಡಿ ಎಂದು ನಾವು ಜನರಿಗೆ ವಿನಂತಿಸುತ್ತೇವೆ ಎಂದು ಪ್ರಶಾಂತ್ ಬಾಜಿರಾವ್ ಹೇಳಿದ್ದಾರೆ.