ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪ್ರಿಯಕರ !
ಹೊಸದಿಲ್ಲಿ: ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಈಶಾನ್ಯ ದೆಹಲಿಯ ಹೋಟೆಲ್ ಕೊಠಡಿಯೊಂದರಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತಪಟ್ಟವರನ್ನು ಶೋರಬ್ (28) ಹಾಗೂ ಆಯೇಷಾ (27) ಎಂದು ಗುರುತಿಸಲಾಗಿದೆ. ಶೋರಬ್ ಮತ್ತು ಆಯೇಷಾ 4 ಗಂಟೆಗಳ ಅವಧಿಗೆ ಓಯೊ ಕೊಠಡಿಯನ್ನು ಕಾಯ್ದಿರಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಿಗದಿತ ಅವಧಿ ಮುಗಿದಾಗ ಹೊಟೇಲ್ ಕೊಠಡಿ ತೆರೆಯದ ಸಂದರ್ಭದಲ್ಲಿ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಈಶಾನ್ಯ ದೆಹಲಿ ಡಿಸಿಪಿ ಜೋಯ್ ತಿರ್ಕೆ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಬೆಡ್ ನಲ್ಲಿ ಆಯೇಷಾ ಮೃತದೇಹದ ಪಕ್ಕ ಅರ್ಧ ಪುಟದ ಆತ್ಮಹತ್ಯೆ ಟಿಪ್ಪಣಿ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಆತ್ಮಹತ್ಯೆ ಟಿಪ್ಪಣಿಯಿಂದ ತಿಳಿದು ಬಂದಂತೆ ಶೋರಬ್ ಮತ್ತು ಆಯೇಷಾ ಪ್ರೇಮಸಂಬಂಧ ಹೊಂದಿದ್ದು, ಇಬ್ಬರೂ ಜಂಟಿಯಾಗಿ ಆತ್ಮಹತ್ಯೆಗೆ ಶರಣಾಗುವ ನಿರ್ಧಾರ ಕೈಗೊಂಡಿದ್ದಾರೆ. ಅಟಾಪ್ಸಿ ವರದಿಯ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣದ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.