1901ರ ಬಳಿಕ, ಆಗಸ್ಟ್ನಲ್ಲಿ ಅತೀ ಕಡಿಮೆ ಮಳೆ
ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ : ಈ ವರ್ಷ ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಬಿದ್ದ ಸರಾಸರಿ ಮಳೆಯು 1901ರ ನಂತರ ದಾಖಲಾಗಿರುವ ಮಳೆ ಪ್ರಮಾಣಕ್ಕಿಂತ ಅತೀ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂಕಿ ಸಂಖ್ಯೆಗಳು ತೋರಿಸಿವೆ. 1901ರಲ್ಲಿ ಭಾರತದಲ್ಲಿ ಮಳೆ ಮತ್ತು ಉಷ್ಣತೆ ದಾಖಲಾತಿಯನ್ನು ಆರಂಭಿಸಲಾಗಿತ್ತು.
ಈ ವರ್ಷ ಆಗಸ್ಟ್ ನಲ್ಲಿ ಭಾರತದಲ್ಲಿ 16.27 ಸೆಂ. ಮೀಟರ್ ಮಳೆ ಸುರಿದಿದೆ. ಇದು ಸರಾಸರಿಗಿಂತ 36%ದಷ್ಟು ಕಡಿಮೆಯಾಗಿದೆ. ಈ ತಿಂಗಳಿನಲ್ಲಿ ಸರಾಸರಿ 25.4 ಸೆಂಟಿಮೀಟರ್ ಮಳೆ ಸುರಿಯುತ್ತದೆ. ಇದಕ್ಕಿಂತ ಮೊದಲು, ದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದ್ದು 2005ರಲ್ಲಿ. ಆ ವರ್ಷ ದೇಶಾದ್ಯಂತ ಸರಾಸರಿ 19.12 ಸೆಂಟಿಮೀಟರ್ ಮಳೆ ಸುರಿದಿತ್ತು.
ಈ ವರ್ಷದ ಆಗಸ್ಟ್ ನಲ್ಲಿ ಬಿಹಾರ, ಪೂರ್ವ ಉತ್ತರಪ್ರದೇಶ, ಝಾರ್ಖಂಡ್, ಛತ್ತೀಸ್ಗಢ, ಗಂಗಾ ನದಿ ತೀರದ ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕದ ಕೆಲವು ಭಾಗಗಳು ಮತ್ತು ಮಹಾರಾಷ್ಟ್ರದಲ್ಲಿ ಕಡಿಮೆ ಮಳೆಯಾಗಿದೆ. ಅದೇ ವೇಳೆ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆ ಸಾಮಾನ್ಯ ಪ್ರಮಾಣದಲ್ಲಿತ್ತು.
ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ದಾಖಲಾದ ಸರಾಸರಿ 32.09 ಡಿಗ್ರಿ ಸೆಲ್ಸಿಯಸ್ ಉಷ್ಣತೆಯೂ 1901ರ ಬಳಿಕದ ಗರಿಷ್ಠವಾಗಿದೆ. ಇದು ಸರಾಸರಿ 31.09 ಡಿಗ್ರಿ ಸೆಲ್ಸಿಯಸ್ಗಿಂತ ಒಂದು ಡಿಗ್ರಿಯಷ್ಟು ಹೆಚ್ಚಾಗಿದೆ.
ಎಲ್ ನಿನೊ ಕಾರಣ
ಈ ವರ್ಷದ ಆಗಸ್ಟ್ನಲ್ಲಿ ಮಳೆಯ ಪ್ರಮಾಣ ಅತ್ಯಂತ ಕಡಿಮೆಯಾಗಿರುವುದಕ್ಕೆ ಎಲ್ ನಿನೊ ಹವಾಮಾನ ಪರಿಸ್ಥಿತಿ ಹಾಗೂ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣಗೊಂಡಿರುವ ಪ್ರತಿಕೂಲ ಸ್ಥಿತಿಗತಿಗಳು ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪೂರ್ವ ಮತ್ತು ಮಧ್ಯ ಶಾಂತ ಸಾಗರದ ಮೇಲ್ಮೈ ಬಿಸಿಯಾಗುವುದನ್ನು ಎಲ್ ನಿನೊ ಎಂದು ಕರೆಯಲಾಗುತ್ತದೆ. ಅದು ಮಳೆ ಕೊರತೆ, ಬೆಳೆ ಹಾನಿ, ಬೆಂಕಿ ಮತ್ತು ದಿಢೀರ್ ಪ್ರವಾಹಗಳಿಗೆ ಕಾರಣವಾಗುತ್ತದೆ.
ಸೆಪ್ಟಂಬರ್ನಲ್ಲಿ ಪರಿಸ್ಥಿತಿ ಸುಧಾರಣೆ?
ಮಳೆ ಪರಿಸ್ಥಿತಿಯು ಸೆಪ್ಟಂಬರ್ ತಿಂಗಳಲ್ಲಿ ಸುಧಾರಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.
ಮಳೆಗಾಲದಲ್ಲಿ ಮಳೆರಹಿತ ಅವಧಿ ಹೆಚ್ಚುತ್ತಿದೆ ಎಂದು ಮೊಹಾಪಾತ್ರ ಹೇಳಿದರು. ಆದರೆ, ಸೆಪ್ಟಂಬರ್ 2ರ ಬಳಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಲಿದೆ ಎಂದರು.
‘‘ದೇಶದ ಪೂರ್ವದ ಭಾಗಗಳು ಮತ್ತು ಸಮುದ್ರ ಆವರಿತ ದಕ್ಷಿಣದಲ್ಲಿ ಮಳೆ ಪುನರಾರಂಭಗೊಳ್ಳಲಿದೆ. ಬಳಿಕ ಅದು ನಿಧಾನವಾಗಿ ದೇಶದ ಇತರ ಭಾಗಗಳನ್ನು ವ್ಯಾಪಿಸುತ್ತದೆ’’ ಎಂದು ಅವರು ತಿಳಿಸಿದರು.