ಲಕ್ನೋ | ಕಾರ್ಮಿಕನ ಮುಖದ ಮೇಲೆ ಮೂತ್ರ ವಿಸರ್ಜನೆ, ಆರೋಪಿ ಬಂಧನ
Photograb : X \ @tanishqq9
ಲಕ್ನೋ : ನಿದ್ರಿಸಿದ್ದ ಕಾರ್ಮಿಕನ ಮುಖದ ಮೇಲೆ ವ್ಯಕ್ತಿಯೋರ್ವ ಮೂತ್ರ ವಿಸರ್ಜನೆ ಮಾಡಿದ ಆಘಾತಕಾರಿ ಘಟನೆಯೊಂದು ಇಲ್ಲಿ ನಡೆದಿದೆ. ಈ ಘಟನೆಯ ವೀಡಿಯೊ ಮಿಂಚಿನ ವೇಗದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿದೆ.
ಹಿಂದಿ ಸುದ್ದಿ ಜಾಲತಾಣವೊಂದರ ವರದಿಯ ಪ್ರಕಾರ ಕಾರ್ಮಿಕ ಮಧ್ಯಾಹ್ನದ ಊಟದ ಬಳಿಕ ಗಾಢನಿದ್ರೆಯಲ್ಲಿದ್ದ. ಆತನನ್ನು ಎಬ್ಬಿಸಲು ಆರೋಪಿಯು ಆತನ ಮುಖದ ಮೇಲೆ ಮೂತ್ರ ವಿಸರ್ಜಿಸಿದ್ದ. ಜೊತೆಗೆ ದೈಹಿಕ ಹಲ್ಲೆಯನ್ನೂ ನಡೆಸಿದ್ದ ಎಂದು ಆರೋಪಿಸಲಾಗಿದೆ. ಸಂತ್ರಸ್ತ ವ್ಯಕ್ತಿಯ ಕುಟುಂಬದ ದೂರಿನ ಮೇರೆಗೆ ಕ್ಷಿಪ್ರ ತನಿಖೆಯನ್ನು ಆರಂಭಿಸಿದ್ದ ಪೋಲಿಸರು ಆರೋಪಿ ಸಂಜಯ್ ಮೌರ್ಯ ಎಂಬಾತನನ್ನು ಬಂಧಿಸಿದ್ದಾರೆ.
ದುಬಗ್ಗಾ ಪೋಲಿಸ್ ಠಾಣಾ ವ್ಯಾಪ್ತಿಯ ಚಂಡಿಯಾ ಖೇಡಾ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. ಕಾರ್ಮಿಕ ರಾಜಕುಮಾರ್ ರಾವತ್ ತನ್ನ ಕುಟುಂಬದೊಂದಿಗೆ ಈ ಪ್ರದೇಶದಲ್ಲಿ ವಾಸವಾಗಿದ್ದು ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಜೊತೆಗೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ವಾಹನಗಳಲ್ಲಿ ತುಂಬಿಸುವ ಮತ್ತು ಇಳಿಸುವ ಕೆಲಸ ಮಾಡುವ ಮೂಲಕ ಬದುಕು ಸಾಗಿಸುತ್ತಿದ್ದಾರೆ.
ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ varthabharati.in ನೋಡ್ತಾ ಇರಿ.
ಜೂ.2ರಂದು ಈ ಘಟನೆ ನಡೆದಿದ್ದು, ನಿದ್ರೆಯಲ್ಲಿದ್ದ ರಾವತ್ರನ್ನು ಎಬ್ಬಿಸಲು ಹೆಸರು ಹಿಡಿದು ಕರೆದಿದ್ದ ಮೌರ್ಯ,ಅವರು ಏಳದಿದ್ದಾಗ ಕುಪಿತಗೊಂಡು ಮುಖದ ಮೇಲೆ ಮೂತ್ರ ವಿಸರ್ಜಿಸಿದ್ದ ಎಂದು ಆರೋಪಿಸಲಾಗಿದೆ. ತನ್ನ ಕೃತ್ಯವನ್ನು ಚಿತ್ರೀಕರಿಸಿದ್ದ ಆತ ವೀಡಿಯೊವನ್ನು ಇತರರೊಂದಿಗೆ ಹಂಚಿಕೊಂಡಿದ್ದ.
ರಾವತ್ ಮತ್ತು ಮೌರ್ಯ ಪರಿಚಿತರಾಗಿದ್ದು,ಇಬ್ಬರೂ ಇಟ್ಟಿಗೆ ಗೂಡಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಉಭಯರೂ ಅಂದು ಮದ್ಯವನ್ನು ಸೇವಿಸಿ ಸ್ಥಳದಲ್ಲಿ ಮಲಗಿದ್ದರು. ನಂತರ ಮೌರ್ಯ ರಾವತ್ ಮುಖದ ಮೇಲೆ ಮೂತ್ರ ವಿಸರ್ಜಿಸಿದ್ದ ಎಂದು ಹಿರಿಯ ಪೋಲಿಸ್ ಅಧಿಕಾರಿ ತಿಳಿಸಿದರು.
थाना दुबग्गा क्षेत्रान्तर्गत घटित घटना के सम्बन्ध में तत्काल अभियोग पंजीकृत कर नामजद अभियुक्त को गिरफ्तार कर विधिक कार्यवाही की जा रही है।
— LUCKNOW POLICE (@lkopolice) June 3, 2024
उक्त के सम्बन्ध में @DCPWEST1 द्वारा दी गई बाइट। @Uppolice pic.twitter.com/gNlTY3QYu3