ಮಹಿಳೆಯಿಂದ ಆಮಿಷ: 12 ವರ್ಷದ ಬಾಲಕಿ ಮೇಲೆ ಅಪ್ರಾಪ್ತರಿಂದ ಅತ್ಯಾಚಾರ
ಹೊಸದಿಲ್ಲಿ: ಮಹಿಳೆಯೊಬ್ಬಳು ಹನ್ನೆರಡು ವರ್ಷದ ಬಾಲಕಿಗೆ ಆಮಿಷವೊಡ್ಡಿ ಕರೆದೊಯ್ದು, ಆ ಬಳಿಕ ಬಾಲಕಿಯ ಮೇಲೆ ಒಬ್ಬ ವ್ಯಕ್ತಿ ಹಾಗೂ ಮೂವರು ಅಪ್ರಾಪ್ತ ವಯಸ್ಸಿನ ಯುವಕರು ಅತ್ಯಾಚಾರ ಎಸಗಿದ ಘಟನೆ ಉತ್ತರ ದೆಹಲಿಯ ಸದರ್ ಬಜಾರ್ ನಲ್ಲಿ ನಡೆದಿದೆ.
ಜನವರಿ 1ರಂದು ನಡೆದ ಈ ಘಟನೆ ಗುರುವಾರ ಪೊಲೀಸರ ಗಮನಕ್ಕೆ ಬಂದಿದ್ದು, ಈ ಸಂಬಂಧ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 376ಡಿ ಮತ್ತು ಇತರ ಸೆಕ್ಷನ್ಗಳ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಮನೋಜ್ ಕುಮಾರ್ ಮೀನಾ ಸ್ಪಷ್ಟಪಡಿಸಿದ್ದಾರೆ.
ಸದರ್ ಬಜಾರ್ ನಲ್ಲಿ ಕೊಳಗೇರಿಯಲ್ಲಿ ಚಹಾ ಮಾರುವ ಸುರೇಶ್ ಕುಮಾರ್ (38) ಎಂಬ ಆರೋಪಿಯನ್ನು ಮೊದಲು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಿಳೆ ಅದೇ ಪ್ರದೇಶದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು. 12, 14 ಮತ್ತು 15 ವರ್ಷದ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಬವಾನಾ ನಿವಾಸಿ ಹಾಗೂ ಚಿಂದಿ ಆಯುವ ಬಾಲಕಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. "ಬವಾನಾ ಪ್ರದೇಶದಲ್ಲಿ ದಿನಾಲೂ ನಾನು ಇತರರ ಜತೆ ಸೇರಿ ಚಿಂದಿ ಆಯುತ್ತೇನೆ. ಜನವರಿ 1ರಂದು ಸದರ್ ಬಜಾರ್ ನಲ್ಲಿ ಒಬ್ಬಂಟಿಯಾಗಿ ಚಿಂದಿ ಆಯುತ್ತಿದ್ದಾಗ ಪರಿಚಿತ ಮಹಿಳೆಯೊಬ್ಬಳು ಬಂದು ಆಸೆ ತೋರಿಸಿ ಆರೋಪಿಗಳು ಕಾಯುತ್ತಿದ್ದ ಪ್ರದೇಶಕ್ಕೆ ಕರೆದೊಯ್ದಳು. ಬಳಿಕ ನಾಲ್ವರು ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದರು" ಎಂದು ಬಾಲಕಿ ದೂರಿನಲ್ಲಿ ವಿವರಿಸಿದ್ದಾಳೆ.
ಘಟನೆ ಬಳಿಕ ಈ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಮಹಿಳೆ ಬೆದರಿಕೆ ಹಾಕಿದ್ದಳು. ಎರಡು ದಿನಗಳ ಕಾಲ ಸುಮ್ಮನಿದ್ದ ಬಾಲಕಿ ಗುರುವಾರ ಮತ್ತೆ ಚಿಂದಿ ಆಯಲು ಬಂದಿದ್ದ ವೇಳೆ ಸಂಬಂಧಿಕರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ವಿವರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.