ಸಾರ್ವಜನಿಕರ ತೆರಿಗೆ ಹಣದಲ್ಲಿ ಮೂವರು ಐಎಎಸ್ ಅಧಿಕಾರಿಗಳಿಂದ ಐಷಾರಾಮಿ ಪ್ಯಾರಿಸ್ ಪ್ರವಾಸ | ಚಂಡೀಗಢ ಲೆಕ್ಕಪರಿಶೋಧನೆ ವರದಿಯಲ್ಲಿ ಬಹಿರಂಗ
ಮೂವರು ಅಧಿಕಾರಿಗಳಿಂದ ಪರಸ್ಪರ ತಮ್ಮ ಪ್ರವಾಸಕ್ಕೆ ಅನುಮತಿ ʼವಿನಿಮಯʼ!
Vijay Dev, Vikram Dev Dutt and Anurag Agarwal. | PC : indianexpress.com
ಚಂಡೀಗಢ : ಬಿಸಿನೆಸ್ ದರ್ಜೆಯ ಟಿಕೆಟ್ ಗಳು, ಐಷಾರಾಮಿ ಪಂಚತಾರಾ ಹೋಟೆಲ್ ಕೋಣೆಗಳು ಹಾಗೂ ಲೆಕ್ಕಕ್ಕಿಡದ ವೆಚ್ಚ – ಇವು 2015ರಲ್ಲಿ ಅಧಿಕೃತ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದ ಮೂವರು ಹಿರಿಯ ಐಎಎಸ್ ಅಧಿಕಾರಿಗಳು ಎಸಗಿರುವ ಅಕ್ರಮಗಳ ಕುರಿತು ಲೆಕ್ಕಪರಿಶೋಧನೆಯಲ್ಲಿ ಬಹಿರಂಗಗೊಂಡಿರುವ ಸಂಗತಿ. ಇದರಿಂದ ಸಾರ್ವಜನಿಕರ ತೆರಿಗೆ ದುಡ್ಡಿನ ದುರುಪಯೋಗದ ಕುರಿತು ಪ್ರಶ್ನೆಗಳೆದ್ದಿವೆ.
ಈ ಮೂವರು ಅಧಿಕಾರಿಗಳು ಚಂಡೀಗಢ ಆಡಳಿತದ ಸಲಹೆಗಾರರಾಗಿದ್ದ ವಿಜಯ್ ದೇವ್, ಆಗಿನ ಚಂಡೀಗಢ ಗೃಹ ಕಾರ್ಯದರ್ಶಿಯಾಗಿದ್ದ ಅನುರಾಗ್ ಅಗರ್ವಾಲ್ ಹಾಗೂ ಅಂದಿನ ಸಿಬ್ಬಂದಿ ಕಾರ್ಯದರ್ಶಿ ವಿಕ್ರಮ್ ದೇವ್ ದತ್ ಆಗಿದ್ದಾರೆ. ಆ ಸಂದರ್ಭದಲ್ಲಿ ಪಂಜಾಬ್ ರಾಜ್ಯಪಾಲರಾಗಿದ್ದ ಕಪ್ತಾನ್ ಸಿಂಗ್ ಸೋಲಂಕಿ ಅವರು ಚಂಡೀಗಢದ ಹೆಚ್ಚುವರಿ ಹೊಣೆಯನ್ನು ಹೊತ್ತಿದ್ದರು.
ಚಂಡೀಗಢ ನಗರದ ಮಾಸ್ಟರ್ ಪ್ಲಾನ್ ರೂಪಿಸಿದ್ದ ಸ್ವಿಸ್-ಫ್ರೆಂಚ್ ಸಂಜಾತ ವಾಸ್ತುಶಿಲ್ಪಿ ಲಿ ಕಾರ್ಬುಸಿಯರ್ ಅವರ 50ನೇ ಪುಣ್ಯ ತಿಥಿಯ ಅಂಗವಾಗಿ ಪ್ಯಾರಿಸ್ ನಲ್ಲಿ ಲಿ ಕಾರ್ಬುಸಿಯರ್ ಪ್ರತಿಷ್ಠಾನವು ಹಮ್ಮಿಕೊಂಡಿದ್ದ ಸಭೆಗೆ 2015ರಲ್ಲಿ ಚಂಡೀಗಢ ಆಡಳಿತವು ಆಮಂತ್ರಣವನ್ನು ಸ್ವೀಕರಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಚಂಡೀಗಢ ಆಡಳಿತವು ನಾಲ್ಕು ಮಂದಿ ಅತಿಥಿಗಳ ಹೆಸರನ್ನು ನಾಮಕರಣ ಮಾಡಿತ್ತು. ಈ ಪೈಕಿ ವಿಜಯ್ ದೇವ್, ವಿಕ್ರಮ್ ದೇವ್ ದತ್ ಹಾಗೂ ಅನುರಾಗ್ ಅಗರ್ವಾಲ್ ಹೆಸರುಗಳಿಗೆ ಅನುಮತಿ ಕೋರಿ ಗೃಹ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಪ್ರವಾಸ ಕಾರ್ಯಕ್ರಮವನ್ನು ಯೋಜಿಸಿ, ಅನುಮತಿ ನೀಡಲಾಗಿತ್ತು. ಸ್ವಾರಸ್ಯಕರ ಸಂಗತಿಯೆಂದರೆ, ಈ ಮೂವರು ಅಧಿಕಾರಿಗಳೇ ಪರಸ್ಪರ ತಮ್ಮ ಪ್ರವಾಸಕ್ಕೆ ಅನುಮತಿ ನೀಡಿರುವುದು. ವಿಜಯ್ ದೇವ್ ಪ್ರವಾಸವನ್ನು ವಿಕ್ರಮ್ ದೇವ್ ದತ್ ಅನುಮೋದಿಸಿದ್ದರೆ, ವಿಕ್ರಮ್ ದೇವ್ ದತ್ ಅವರ ಪ್ರವಾಸಕ್ಕೆ ವಿಜಯ್ ದೇವ್ ಅನುಮತಿ ನೀಡಿದ್ದಾರೆ. ಅನುರಾಗ್ ಅಗರ್ವಾಲ್ ಅವರ ಪ್ರವಾಸ ಕಾರ್ಯಕ್ರಮಕ್ಕೂ ವಿಜಯ್ ದೇವ್ ಸಮ್ಮತಿಯ ಮುದ್ರೆ ಒತ್ತಿದ್ದಾರೆ.
ಚಂಡೀಗಢದ ಪ್ರಧಾನ ಲೆಕ್ಕಪರಿಶೋಧನಾ ನಿರ್ದೇಶಕರು (ಕೇಂದ್ರೀಯ) ವರದಿಯ ಪ್ರಕಾರ, ಸದರಿ ಆಮಂತ್ರಣವನ್ನು ಮೂಲತಃ ಕೇವಲ ಒಬ್ಬ ಅಧಿಕಾರಿಗೆ ನೀಡಲಾಗಿತ್ತು – ಚಂಡೀಗಢ ಮುಖ್ಯ ವಾಸ್ತು ಶಿಲ್ಪಿಗೆ. ಆದರೆ, ಕಾರ್ಯದರ್ಶಿ ಮಟ್ಟದ ಮೂವರು ಅಧಿಕಾರಿಗಳು ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಅದೂ ಸಾರ್ವಜನಿಕರ ತೆರಿಗೆಯ ದುಡ್ಡಿನಲ್ಲಿ. ವರದಿಯ ಪ್ರಕಾರ, ಈ ಪ್ರವಾಸವನ್ನು ಆತಿಥೇಯ ಸಂಸ್ಥೆಯು ಪ್ರಾಯೋಜಿಸಿರಲಿಲ್ಲ ಹಾಗೂ ಪ್ರವಾಸದ ಎಲ್ಲ ವೆಚ್ಚವನ್ನೂ ಚಂಡೀಗಢ ಆಡಳಿತವು ಭರಿಸಿತ್ತು. ಇದಲ್ಲದೆ ಪ್ರವಾಸಕ್ಕೆ ತೆರಳಿದ್ದ ಅಧಿಕಾರಿಗಳು, ಐದು ದಿನಕ್ಕಿಂತ ಹೆಚ್ಚಿನ ಅವಧಿಯ ವಿದೇಶಿ ಪ್ರವಾಸಕ್ಕೆ ತೆರಳುವಾಗ, ಪರಿಶೀಲನಾ ಸಮಿತಿಯ ಅನುಮತಿ ಇಲ್ಲದೆ ಪ್ರವಾಸ ಕೈಗೊಳ್ಳುವಂತಿಲ್ಲ ಎಂಬ ನಿಯಮವನ್ನೂ ಉಲ್ಲಂಘಿಸಿದ್ದಾರೆ. ಈ ಪ್ರವಾಸವು ಏಳು ದಿನಗಳದ್ದಾಗಿತ್ತು. ಯಾವುದೇ ಅನುಮೋದನೆ ಇಲ್ಲದೆ ಈ ಅಧಿಕಾರಿಗಳು ಹೇಗೆ ಒಂದು ದಿನದ ಪ್ರವಾಸವನ್ನು ಏಳು ದಿನಗಳ ಪ್ರವಾಸವನ್ನಾಗಿ ವಿಸ್ತರಿಸಿಕೊಂಡಿದ್ದಾರೆ ಎಂಬುದರತ್ತಲೂ ವರದಿಯಲ್ಲಿ ಬೊಟ್ಟು ಮಾಡಲಾಗಿದೆ.
ಈ ಪ್ರವಾಸಕ್ಕಾಗಿ ಪ್ರತಿಯೊಬ್ಬ ಅಧಿಕಾರಿಯ ಬಿಸಿನೆಸ್ ದರ್ಜೆಯ ಟಿಕೆಟ್ ಶುಲ್ಕ ವೆಚ್ಚ ತಲಾ ರೂ. 1.77 ಲಕ್ಷವಾಗಿದೆ. ಲೆಕ್ಕ ಪರಿಶೋಧನಾ ವರದಿಯಲ್ಲಿ ಹೋಟೆಲ್ ವಾಸ್ತವ್ಯವನ್ನೂ ಬದಲಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. “ಮೊದಲಿಗೆ, ಜೂನ್ 12, 2015ರಿಂದ ಜೂನ್ 18, 2015ರವರೆಗೆ (7 ದಿನಗಳು) ಇಂಟರ್ ಕಾಂಟಿನೆಂಟಲ್ ಹೋಟೆಲ್ ಪ್ಯಾರಿಸ್ ಅವೆನ್ಯೂ ಹೋಟೆಲ್ ನಲ್ಲಿ ಕೋಣೆಗಳನ್ನು ಕಾಯ್ದಿರಿಸಲಾಗಿತ್ತು. ಅದರಂತೆ, ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯ ಸಲಹೆಗಾರರಿಗೆ ರೂ. 4,39,168 ಶುಲ್ಕ, ನಗರ ಯೋಜನೆ ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಕಾರ್ಯದರ್ಶಿಗೆ ರೂ. 3,42,954 ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಆದರೆ, ನಂತರ, ಈ ಅಧಿಕಾರಿಗಳ ವಾಸ್ತವ್ಯವನ್ನು ಜೂನ್ 12, 2015ರಿಂದ ಜೂನ್ 18, 2015ರವರೆಗೆ ಪ್ಯಾರಿಸ್ ನ ಹೋಟೆಲ್ ಲಿ ರಾಯಲ್ ಮಾಂಸಿಯುಗೆ ಬದಲಿಸಲಾಗಿದೆ. ಅದರಂತೆ ಕೇಂದ್ರಾಡಳಿತ ಪ್ರದೇಸದ ಆಡಳಿತಾಧಿಕಾರಿಯ ಸಲಹೆಗಾರರ ಶುಲ್ಕ ವೆಚ್ಚವು ರೂ. 9,10,364ಕ್ಕೆ ಏರಿಕೆಯಾಗಿದ್ದರೆ, ಸಿಬ್ಬಂದಿಗಳ ಕಾರ್ಯದರ್ಶಿ ಹಾಗೂ ನಗರ ಯೋಜನೆ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿಯ ಶುಲ್ಕ ವೆಚ್ಚವು ರೂ. 4,43,498ಕ್ಕೆ ಏರಿಕೆಯಾಗಿದೆ” ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಹೇಳಲಾಗಿದೆ. ಇದರಿಂದ ವ್ಯತ್ಯಾಸವಾಗಿರುವ ಮೊತ್ತವು ಸುಮಾರು ರೂ. 6.7 ಲಕ್ಷವಾಗಿದೆ.
ಮಾಹಿತಿ ಹಕ್ಕು ಕಾಯ್ದೆಯ ದಾಖಲೆಗಳ ಪ್ರಕಾರ, ವಿಜಯ್ ದೇವ್ ಅವರಿಗೆ ಸುಮಾರು ರೂ. 6.5 ಲಕ್ಷ, ಅನುರಾಗ್ ಅಗರ್ವಾಲ್ ಗೆ ರೂ. 5.6 ಲಕ್ಷ ಹಾಗೂ ವಿಕ್ರಮ್ ದೇವ್ ದತ್ತ ಅವರಿಗೆ ರೂ. 5.7 ಲಕ್ಷವನ್ನು ಮೊದಲಿಗೆ ಪ್ರವಾಸ ವೆಚ್ಚವನ್ನಾಗಿ ನಿಗದಿಗೊಳಿಸಲಾಗಿತ್ತು. ಇವರೆಲ್ಲರ ಪ್ರವಾಸದ ಒಟ್ಟಾರೆ ವೆಚ್ಚವು ಸುಮಾರು ರೂ. 18 ಲಕ್ಷವಾಗಿತ್ತು. ಹೀಗಿದ್ದೂ, ಪ್ರವಾಸ ವೆಚ್ಚವು ರೂ. 25 ಲಕ್ಷವನ್ನು ದಾಟುವ ಮೂಲಕ, ಮೊದಲಿಗೆ ಮಂಜೂರಾದ ವೆಚ್ಚಕ್ಕಿಂತ ಸುಮಾರು ಶೇ. 40ರಷ್ಟು ಹೆಚ್ಚು ವೆಚ್ಚವಾಗಿತ್ತು.
ಪ್ರವಾಸ ಮುಗಿದ ಸುಮಾರು ಒಂದು ತಿಂಗಳ ನಂತರ ವಿಕ್ರಮ್ ದೇವ್ ದತ್ತ ಅಡಿಯ ಕೇಂದ್ರಾಡಳಿತ ಆಡಳಿತವು ವಿಜಯ್ ದೇವ್ ಅವರ ವೆಚ್ಚವನ್ನು ಏರಿಕೆ ಮಾಡಿತು. ಇದಕ್ಕೆ ಪ್ರತಿಯಾಗಿ ವಿಜಯ್ ದೇವ್ ಅವರು ವಿಕ್ರಮ್ ದೇವ್ ದತ್ ಹಾಗೂ ಅನುರಾಗ್ ಅಗರ್ವಾಲ್ ಅವರ ವೆಚ್ಚ ಏರಿಕೆಗೆ ಅನುಮೋದನೆ ನೀಡಿದರು. ಈ ಹಿಂದೆ ಇವರೆಲ್ಲರೂ ಪರಸ್ಪರ ನೆರವಾದಂತೆಯೆ ಈ ವಿಚಾರದಲ್ಲಿಯೂ ಪರಸ್ಪರ ನೆರವು ವಿನಿಮಯ ಮಾಡಿಕೊಂಡರು.
ಈ ಪ್ರವಾಸ ಮುಗಿದ ನಂತರ ಇದೀಗ ಇಬ್ಬರು ಅಧಿಕಾರಿಗಳು ವರ್ಗಾವಣೆಗೊಂಡಿದ್ದರೆ, ಓರ್ವ ಅಧಿಕಾರಿ ನಿವೃತ್ತರಾಗಿದ್ದಾರೆ. ಸದ್ಯ ನಿವೃತ್ತರಾಗಿರುವ ವಿಜಯ್ ಕುಮಾರ್ ದೇವ್ ಇದೀಗ ದಿಲ್ಲಿ ಚುನಾವಣಾ ಆಯುಕ್ತರಾಗಿದ್ದರೆ, ವಿಕ್ರಮ್ ದೇವ್ ದತ್ತ ಅವರು ಪ್ರಧಾನ ನಾಗರಿಕ ವಿಮಾನ ಯಾನ ನಿಯಂತ್ರಣ ನಿರ್ದೇಶಕರಾಗಿದ್ದಾರೆ ಹಾಗೂ ಅನುರಾಗ್ ಅಗರ್ವಾಲ್ ಅವರು ಹರ್ಯಾಣದ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ.
ಸೌಜನ್ಯ: indianexpress.com