ಮಧ್ಯಪ್ರದೇಶ: ಬಿಜೆಪಿ ಸದಸ್ಯತ್ವ ಪಡೆದುಕೊಳ್ಳಲು ನಿರಾಕರಿಸಿದ್ದಕ್ಕೆ ಯುವಕನಿಗೆ ಥಳಿತ
ಸಾಂದರ್ಭಿಕ ಚಿತ್ರ
ಮಧ್ಯಪ್ರದೇಶ: ಬಿಜೆಪಿ ಸದಸ್ಯತ್ವ ಪಡೆಯಲು ನಿರಾಕರಿಸಿದ ಯುವಕನ ಮೇಲೆ ನಾಲ್ವರು ಅಪರಿಚಿತ ವ್ಯಕ್ತಿಗಳು ಥಳಿಸಿರುವ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ನಡೆದಿದೆ.
ಮಾನವೇಂದ್ರ ಸಿಂಗ್ ಯಾದವ್(27) ಮೇಲೆ ಹಲ್ಲೆ ನಡೆಸಲಾಗಿದ್ದು, ಬಮಿತಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-39ರ ಟೋಲ್ ಪ್ಲಾಝಾದಲ್ಲಿ ಈ ಘಟನೆ ನಡೆದಿದೆ.
ಮಾನವೇಂದ್ರ ಸಿಂಗ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗಳಿಗೆ ಮೀಸಲಿರಿಸಿದ ವಾಹನದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಸೋಮವಾರ ಮಧ್ಯಾಹ್ನ ಟೋಲ್ ಪ್ಲಾಝಾದಲ್ಲಿ ನನ್ನನ್ನು ಭೇಟಿಯಾದ ನಾಲ್ವರು ಅಪರಿಚಿತರು ಮೊದಲು ಮೊಬೈಲ್ ಪೋನ್ ಕೊಡುವಂತೆ ಕೇಳಿದ್ದಾರೆ, ಬಳಿಕ ಬಿಜೆಪಿ ಸದಸ್ಯತ್ವ ಪಡೆಯಲು ಪೋನ್ನಿಂದ ಮಿಸ್ಡ್ ಕಾಲ್ ನೀಡಬೇಕೆಂದು ಹೇಳಿದ್ದಾರೆ. ಇದಕ್ಕೆ ನಿರಾಕರಿಸದಾಗ ನನ್ನನ್ನು ನಿಂದಿಸಿ ಥಳಿಸಲಾಗಿದೆ ಮತ್ತು ಮೊಬೈಲ್ ಫೋನ್ ಅನ್ನು ಕಿತ್ತುಕೊಳ್ಳಲಾಗಿದೆ ಎಂದು ಮಾನವೇಂದ್ರ ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಬಮಿತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಛತ್ತರ್ಪುರ ಪೊಲೀಸ್ ವರಿಷ್ಠಾಧಿಕಾರಿ ಆಗಮ್ ಜೈನ್ ಹೇಳಿದ್ದಾರೆ.