ಮಧ್ಯಪ್ರದೇಶ | ದಲಿತ ಯುವಕನಿಗೆ ಚಪ್ಪಲಿ ಹಾರ ಹಾಕಿ, ಅರೆನಗ್ನ ಮೆರವಣಿಗೆ ; ಇಬ್ಬರ ಬಂಧನ
ಸಾಂದರ್ಭಿಕ ಚಿತ್ರ
ಮಂಡಸೌರ್: ಮಹಿಳೆಯೊಬ್ಬರನ್ನು ಚುಡಾಯಿಸಿದ ಎಂಬ ಆರೋಪಕ್ಕೆ ಗುರಿಯಾಗಿದ್ದ ದಲಿತ ಯುವಕನ ಮುಖಕ್ಕೆ ಮಸಿ ಬಳಿದು, ಆತನ ಕುತ್ತಿಗೆಯ ಸುತ್ತ ಚಪ್ಪಲಿ ಹಾರ ಹಾಕಿ, ಅರೆ ನಗ್ನವಾಗಿ ಮೆರವಣಿಗೆ ಮಾಡಿರುವ ಘಟನೆ ಮಂಡಸೌರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆಯೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯು ಭಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೈಸೋದಮಂಡಿ ಗ್ರಾಮದಲ್ಲಿ ಕಳೆದ ವಾರದ ಆರಂಭದಲ್ಲಿ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಆನಂದ್ ತಿಳಿಸಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ ವ್ಯಕ್ತಿಯೊಬ್ಬನ ಮುಖಕ್ಕೆ ಮಸಿ ಬಳಿಯಲಾಗಿದ್ದು, ಕೇವಲ ಪ್ಯಾಂಟ್ ಧರಿಸಿರುವ ಆತನ ಸುತ್ತ ಚಪ್ಪಲಿಯ ಹಾರ ಹಾಕಿ ಬಲವಂತವಾಗಿ ಗುಂಪೊಂದು ಗ್ರಾಮದ ಬೀದಿಗಳಲ್ಲಿ ಎಳೆದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ.
ಮಹಿಳೆಯೊಬ್ಬರನ್ನು ಚುಡಾಯಿಸಿದ ಕಾರಣಕ್ಕೆ ಈ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದ್ದು, ಆರೋಪಿ ಯುವಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ತನ್ನ ಮೇಲಿನ ಹಲ್ಲೆಯನ್ನು ಆರೋಪಿ ಯುವಕ ಬಹಿರಂಗಗೊಳಿಸದಿದ್ದರೂ, ಮಂಗಳವಾರ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, ಪೊಲೀಸರು ಮತ್ತೆ ಆ ಯುವಕನನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ.
ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನೂ ಬಂಧಿಸಲಾಗಿದ್ದು, ಆರೋಪಿ ದಲಿತ ಯುವಕನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.