ಮಧ್ಯಪ್ರದೇಶ | 16 ವರ್ಷಗಳಿಂದ ಗಂಡನ ಮನೆಯಲ್ಲಿ ಒತ್ತೆಸೆರೆಯಲ್ಲಿದ್ದ ಮಹಿಳೆಯ ರಕ್ಷಣೆ
ಸಾಂದರ್ಭಿಕ ಚಿತ್ರ
ಭೋಪಾಲ್: 16 ವರ್ಷಗಳಿಂದ ಗಂಡನ ಮನೆಯವರಿಂದ ಒತ್ತೆಸೆರೆಯಲ್ಲಿದ್ದ ಮಹಿಳೆಯನ್ನು ಶನಿವಾರ ಭೋಪಾಲ್ ನಲ್ಲಿ ರಕ್ಷಿಸಲಾಗಿದೆ.
ರಾನು ಸಾಹು ಒತ್ತೆಸೆರೆಯಲ್ಲಿದ್ದ ಮಹಿಳೆ ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ನರಸಿಂಗ್ಪುರದ ರಾನು ಅವರ ತಂದೆ ಕಿಶನ್ ಲಾಲ್ ಸಾಹು ಅವರು ನೀಡಿದ ದೂರಿನ ನಂತರ ಮಹಿಳೆ ರಾನು ಸಾಹು ಅವರನ್ನು ರಕ್ಷಿಸಲಾಗಿದೆ ಎಂದು ಜಹಾಂಗೀರಾಬಾದ್ ಮಹಿಳಾ ಠಾಣಾ ಪೊಲೀಸ್ ಠಾಣೆಯ ಉಸ್ತುವಾರಿ ಶಿಲ್ಪಾ ಕೌರವ್ india today ಗೆ ತಿಳಿಸಿದ್ದಾರೆ.
ರಾನು ಸಾಹು 2006 ರಲ್ಲಿ ಮದುವೆಯಾಗಿದ್ದರು. 2008 ರಿಂದ ಆಕೆಯ ಗಂಡನ ಮನೆಯವರು ತನ್ನ ಕುಟುಂಬವನ್ನು ಭೇಟಿಯಾಗಲು ಅವಕಾಶ ನೀಡದೇ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ರಾನು ತನ್ನ ಮಗ ಮತ್ತು ಮಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ ಎಂದು ಕಿಶನ್ ಲಾಲ್ ಆರೋಪಿಸಿದ್ದಾರೆ.
ಇತ್ತೀಚೆಗೆ, ರಾನು ಸಾಹು ಅವರ ಗಂಡನ ಮನೆಯ ನೆರೆಹೊರೆಯವರು ಕಿಶನ್ ಲಾಲ್ ಅವರಿಗೆ, ರಾನುವಿನ ಸ್ಥಿತಿಯನ್ನು ತಿಳಿಸಿದ್ದಾರೆ. ಗಂಡನ ಕುಟುಂಬದ ಕಿರುಕುಳದಿಂದ ಆಕೆಯ ಆರೋಗ್ಯದ ಸ್ಥಿತಿ ಹದಗೆಡುತ್ತಿದೆ ಎಂದು ಮಾಹಿತಿ ಸಿಕ್ಕ ಬಳಿಕ ಕಿಶನ್ ಲಾಲ್ ಅವರು ದೂರು ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ತಂಡವು ಎನ್ ಜಿ ಒ ಸಹಾಯದಿಂದ ರಾನುವನ್ನು ರಕ್ಷಿಸಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.