ಮಧ್ಯಪ್ರದೇಶ | ಮತ್ತೆರೆಡು ಕಾಡಾನೆಗಳ ಸಾವು
ಸಾಂದರ್ಭಿಕ ಚಿತ್ರ
ಉಮರಿಯಾ : ಮಧ್ಯಪ್ರದೇಶದ ಬಾಂದವಗಢ ಹುಲಿ ಅಭಯಾರಣ್ಯದಲ್ಲಿ ವಿಷಾಹಾರ ಸೇವಿಸಿ ಮತ್ತೆ ಎರಡು ಕಾಡಾನೆಗಳು ಮೃತಪಟ್ಟಿವೆ. ಇದರೊಂದಿಗೆ ಈ ವಾರದಲ್ಲಿ ಇದುವರೆಗೆ ಸಾವನ್ನಪ್ಪಿದ ಕಾಡಾನೆಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
‘‘ಒಂದು ಕಾಡಾನೆ ಬುಧವಾರ ಹಾಗೂ ಇನ್ನೊಂದು ಗುರುವಾರ ಬೆಳಗ್ಗೆ ಸಾವನ್ನಪ್ಪಿದೆ. ಒಂದು ಕಾಡಾನೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ’’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 9 ಕಾಡಾನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಾಡಾನೆಗಳ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಮುಖ್ಯ ಅರಣ್ಯ(ವನ್ಯಜೀವಿ) ಸಂರಕ್ಷಣಾಧಿಕಾರಿ ಎಲ್. ಕೃಷ್ಣಮೂರ್ತಿ, ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪಶು ವೈದ್ಯರು ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ಆನೆಗಳ ಹೊಟ್ಟೆಯಲ್ಲಿ ವಿಷಾಂಶ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ.
‘‘ಆನೆಗಳ ಹೊಟ್ಟೆಯಲ್ಲಿ ರಾಗಿ ಕೂಡ ಪತ್ತೆಯಾಗಿದೆ’’ ಎಂದು ಪೂರ್ವ ಮಧ್ಯಪ್ರದೇಶದ ಉಮರಿಯಾ ಹಾಗೂ ಕಟ್ನಿ ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಬಾಂಧವಗಡದಲ್ಲಿ ಆನೆಗಳ ಸಾವಿನ ಕುರಿತು ತನಿಖೆ ನಡೆಸುತ್ತಿರುವ ರಾಜ್ಯ ಸರಕಾರ ನಿಯೋಜಿತ ಐವರು ಸದಸ್ಯರ ಸಮಿತಿ ಮುಖ್ಯಸ್ಥರು ಕೂಡ ಆಗಿರುವ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಮೃತಪಟ್ಟ ಆನೆಗಳು ಗದ್ದೆಯಲ್ಲಿ ಕೆಲವು ಕೀಟನಾಶಕಗಳನ್ನು ಸಿಂಪಡಿಸಿರುವ ಬೆಳೆಯನ್ನು ತಿಂದಿರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿರುವ ಕೃಷ್ಣಮೂರ್ತಿ, ಮಂಗಗಳು ಕೂಡ ದೊಡ್ಡ ಪ್ರಮಾಣದಲ್ಲಿ ರಾಗಿಯನ್ನು ತಿನ್ನುತ್ತವೆ. ಆದರೆ, ಅವು ಸಾವನ್ನಪ್ಪುವುದಿಲ್ಲ. ನಾವು ಆನೆಗಳ ಒಳಾಂಗಗಳನ್ನು ಜಬಲ್ಪುರ ಮೂಲದ ವನ್ಯ ಜೀವಿ ವಿಧಿವಿಜ್ಞಾನ ಹಾಗೂ ಆರೋಗ್ಯ ಪರೀಕ್ಷೆಯ ಶಾಲೆಗೆ ಕಳುಹಿಸಿಕೊಟ್ಟಿದ್ದೇವೆ. ವಿಧಿ ವಿಜ್ಞಾನ ಪರೀಕ್ಷೆ ಮಾತ್ರ ಆನೆ ಹೊಟ್ಟೆ ಸೇರಿದ ವಿಷ ಪದಾರ್ಥವನ್ನು ಬಹಿರಂಗಗೊಳಿಸಲಿದೆ ಎಂದಿದ್ದಾರೆ.