ಮಧ್ಯಪ್ರದೇಶ | ಸ್ವದೇಶಿ ಜಾಗರಣ್ ಮಂಚ್ ಸಂಘಟಿಸಿದ್ದ ವ್ಯಾಪಾರ ಮೇಳದಿಂದ ನಮ್ಮನ್ನು ತೆರವುಗೊಳಿಸಲಾಗಿದೆ : ಮುಸ್ಲಿಂ ವರ್ತಕರ ಆರೋಪ
PC : NDTV
ಭೋಪಾಲ್: ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು ಹಾಗೂ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲು ಆಯೋಜನೆಗೊಂಡಿರುವ ವ್ಯಾಪಾರ ಮೇಳವೊಂದು ಭಾರಿ ವಿವಾದ ಸೃಷ್ಟಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ದಾಮೋಹ್ ಜಿಲ್ಲೆಯ ತೆಹ್ಸಿಲ್ ಮೈದಾನದಲ್ಲಿ ಆಯೋಜಿಸಲಾಗಿರುವ ‘ಸ್ವದೇಶಿ ಮೇಳ’ದಿಂದ ನಮ್ಮನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಿರುವ ಮುಸ್ಲಿಂ ವರ್ತಕರು, “ಈ ಮೇಳಕ್ಕೆ ಮುಸ್ಲಿಮರಿಗೆ ಅನುಮತಿಯಿಲ್ಲ” ಎಂದು ಸಂಘಟಕರು ತಿಳಿಸಿದ್ದಾರೆ ಎಂದೂ ದೂರಿದ್ದಾರೆ.
ನಾವು ಮಳಿಗೆಗಳನ್ನು ಕಾಯ್ದಿರಿಸಿ, ಶುಲ್ಕವನ್ನು ಪಾವತಿಸಿದ ನಂತರ, ರವಿವಾರ ನಮಗೆ ವ್ಯಾಪಾರ ಮೇಳವನ್ನು ತೊರೆಯುವಂತೆ ಸೂಚಿಸಲಾಗಿದೆ ಎಂದು ಅವರು ಆಪಾದಿಸಿದ್ದಾರೆ. ಅಕ್ಟೋಬರ್ 14ರಿಂದ ಪ್ರಾರಂಭಗೊಂಡಿರುವ ಈ ವ್ಯಾಪಾರ ಮೇಳವು ನವೆಂಬರ್ 24ರವರೆಗೆ ಮುಂದುವರಿಯಲಿದೆ.
ಸ್ವದೇಶಿ ಜಾಗರಣ್ ಮಂಚ್ ಸಂಘಟಿಸಿರುವ ಈ ವ್ಯಾಪಾರ ಮೇಳದ ಬಿತ್ತಿ ಚಿತ್ರಗಳಲ್ಲಿ ಸಮಾನತೆ, ಸೌಹಾರ್ದತೆ ಹಾಗೂ ರಾಷ್ಟ್ರೀಯ ಐಕ್ಯತೆಯನ್ನು ಪ್ರತಿಪಾದಿಸಲಾಗಿದ್ದು, ಯಾವುದೇ ತಾರತಮ್ಯವಿಲ್ಲದೆ ಒಟ್ಟಾಗಿ ಬಾಳಬೇಕು ಎಂದು ಸಾರಲಾಗಿದೆ. ಆದರೆ, ವಾಸ್ತವ ಇದಕ್ಕಿಂತ ಭಿನ್ನವಾಗಿದ್ದು, ಆ ಉನ್ನತ ಸಂದೇಶಗಳಿಗೆ ವ್ಯತಿರಿಕ್ತವಾಗಿರುವಂತೆ ಕಂಡು ಬರುತ್ತಿದೆ.
“ಅವರು ನನ್ನ ಹೆಸರನ್ನು ಕೇಳಿದರು ಹಾಗೂ ನನ್ನ ಮಳಿಗೆಯನ್ನು ಮುಚ್ಚಿಸಿದರು. ಇಲ್ಲಿ ನಮ್ಮ 10 ಮಳಿಗೆಗಳಿವೆ. ಈ ಮೇಳಕ್ಕೆ ಮುಸ್ಲಿಮರಿಗೆ ಪ್ರವೇಶವಿಲ್ಲ ಎಂದು ಸಂಘಟಕರು ತಿಳಿಸಿದರು. ಇದರಿಂದ ನಮ್ಮ ಬಾಡಿಗೆ ಹಾಗೂ ಪ್ರಯಾಣ ವೆಚ್ಚ ವ್ಯರ್ಥವಾಯಿತು” ಎಂದು ಆಗ್ರಾದ ವ್ಯಾಪಾರಿ ಮುಹಮ್ಮದ್ ರಶೀದ್ ಬೇಸರ ವ್ಯಕ್ತಪಡಿಸಿದ್ದಾರೆ.
“ನಾವು ಮಳಿಗೆಗಳನ್ನು ನಿರ್ಮಿಸಲು ಅವರು ನಿರಾಕರಿಸಿದರು ಹಾಗೂ ಅಲ್ಲಿಂದ ತೆರಳುವಂತೆ ನಮಗೆ ಸೂಚಿಸಿದರು” ಎಂದು ಲಕ್ನೊದ ಅಂಗಡಿ ಮಾಲಕ ಶಬ್ಬೀರ್ ಹೇಳಿದ್ದಾರೆ.
“ಅವರು ಮುಸ್ಲಿಮರನ್ನು ತೆರವುಗೊಳಿಸುತ್ತಿದ್ದಾರೆ. ಸುಮಾರು 15-20 ಮಂದಿಗೆ ಮಳಿಗೆಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ” ಎಂದು ಭಡೋಶಿಯ ವರ್ತಕ ವಕೀಲ್ ಅಹ್ಮದ್ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದಾಮೋಹ್ ಜಿಲ್ಲಾಧಿಕಾರಿ ಸುಧೀರ್ ಕೊಚ್ಚಾರ್, ಈ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಸ್ವದೇಶಿ ಜಾಗರಣ್ ಮಂಚ್ ಈ ಮೇಳವನ್ನು ಆಯೋಜಿಸಿರುವುದರಿಂದ, ಯಾರು ಭಾಗವಹಿಸಬೇಕು ಎಂದು ನಿರ್ಧರಿಸುವ ಅಧಿಕಾರ ಅದಕ್ಕಿದೆ ಎಂದೂ ಹೇಳಿದ್ದಾರೆ.
“ನಾನು ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದು ಸರಕಾರಿ ಕಾರ್ಯಕ್ರಮವಲ್ಲ, ಬದಲಿಗೆ ಸ್ವದೇಶಿ ಜಾಗರಣ್ ಮಂಚ್ ಕಾರ್ಯಕ್ರಮ. ಹೀಗಾಗಿ, ಭಾಗವಹಿಸುವಿಕೆಯನ್ನು ನಿರ್ಧರಿಸುವ ಅಧಿಕಾರ ಅವರಿಗಿದೆ. ಆದರೂ, ನಾವು ಈ ಕುರಿತು ಮಾಹಿತಿ ಕಲೆ ಹಾಕುತ್ತೇವೆ ಹಾಗೂ ಅಗತ್ಯ ಬಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಈ ವ್ಯಾಪಾರ ಮೇಳವು ವಿವಿಧ ರಾಜ್ಯಗಳ ವರ್ತಕರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಭಿತ್ತಿ ಚಿತ್ರಗಳು ಸಮಾನತೆ ಹಾಗೂ ರಾಷ್ಟ್ರೀಯ ಐಕ್ಯತೆಯನ್ನು ಪ್ರತಿಪಾದಿಸಿದ್ದರೂ, ಮುಸ್ಲಿಂ ವರ್ತಕರನ್ನು ಮೇಳದಿಂದ ತೆರವುಗೊಳಿಸಿರುವುದರಿಂದ ತಾರತಮ್ಯದ ಆರೋಪಗಳು ಕೇಳಿ ಬಂದಿವೆ. ವರ್ತಕರೀಗ ಮರುಪಾವತಿಯನ್ನು ಬಯಸುತ್ತಿದ್ದು, ಇದರಿಂದ ಮೇಳದ ಪ್ರತಿಪಾದನೆಗೆ ಕೊಂಚವಾದರೂ ವಿಶ್ವಾರಸಾರ್ಹತೆ ಮರುಸ್ಥಾಪನೆಯಾಗಬಹುದು ಎಂದು ಅವರು ಹೇಳಿದ್ದಾರೆ.
ಸೌಜನ್ಯ: ndtv.com