ಮಧ್ಯಪ್ರದೇಶ: ‘ಮರ್ಯಾದಾ ಹತ್ಯೆ’ | ತಮ್ಮ ಆಯ್ಕೆಯ ಯುವಕನೊಂದಿಗೆ ವಿವಾಹ ನಿರಾಕರಿಸಿದ್ದಕ್ಕೆ ತಂದೆಯಿಂದಲೇ ಮಗಳ ಹತ್ಯೆ
ಸಾಂದರ್ಭಿಕ ಚಿತ್ರ
ಭೋಪಾಲ: ‘ಮರ್ಯಾದಾ ಹತ್ಯೆ’ ಪ್ರಕರಣವೊಂದರಲ್ಲಿ 20 ವರ್ಷದ ತನು ಗುರ್ಜರ್ ಎಂಬ ಯುವತಿಯನ್ನು ಆಕೆಯ ತಂದೆ, ಡಾಬಾ ಮಾಲಿಕ ಮಹೇಶ್ ಗುರ್ಜರ್ ಹಾಗೂ ಅವರ ಸೋದರ ಸಂಬಂಧಿ ರಾಹುಲ್ ಗುಂಡು ಹಾರಿಸಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಆದರ್ಶ ನಗರದಲ್ಲಿ ಮಂಗಳವಾರ ನಡೆದಿದೆ.
ಗುರ್ಜರ್ ಸಮುದಾಯದ ಯುವತಿ ತನು ಗುಜ್ಜಾರ್ಗೆ ಭಾರತೀಯ ವಾಯು ಪಡೆ (ಐಎಎಫ್)ಯ ಸಿಬ್ಬಂದಿಯೊಂದಿಗೆ ಜನವರಿ 18ರಂದು ವಿವಾಹ ನಿಶ್ಚಯಿಸಲಾಗಿತ್ತು. ಆದರೆ, ಆಕೆ ಆಗ್ರಾದ ನಿರುದ್ಯೋಗಿಯಾಗಿದ್ದ ಗುರ್ಜರ್ ಯುವಕನನ್ನು 6 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಆದುದರಿಂದ ಹೆತ್ತವರು ಹೇಳಿದ ಯುವಕನನ್ನು ವಿವಾಹವಾಗಲು ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ತಂದೆ ಮಹೇಶ್ ಗುರ್ಜರ್ ಆಕೆಯನ್ನು ಮಂಗಳವಾರ ರಾತ್ರಿ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ ಯುವತಿಯ ಮುಖ ಹಾಗೂ ತಲೆಗೆ ತೀರಾ ಸಮೀಪದಿಂದ ಎರಡು ಪ್ರತ್ಯೇಕ ಅಕ್ರಮ ಬಂದೂಕಿನಿಂದ ಗುಂಡು ಹಾರಿಸಲಾಗಿದೆ. ಕನಿಷ್ಠ ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ. ‘‘ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ತಂದೆ ಹಾಗೂ ಸೋದರ ಸಂಬಂಧಿ ಸಹೋದರನನ್ನು ಬಂಧಿಸಲಾಗಿದೆ ಎಂದು ಗ್ವಾಲಿಯರ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ಆಘಾತಕಾರಿ ವಿಚಾರವೆಂದರೆ, ಈ ಭೀಕರ ಹತ್ಯೆಗೆ ಕೆಲವೇ ಗಂಟೆಗಳ ಮುನ್ನ ಯುವತಿ ಒಂದು ವೀಡಿಯೊ ಪೋಸ್ಟ್ ಮಾಡಿದ್ದಳು. ಅದರಲ್ಲಿ ತನಗೆ ಏನಾದರೂ ಸಂಭವಿಸಿದರೆ, ಅದಕ್ಕೆ ತನ್ನ ಕುಟುಂಬವೇ ಜವಾಬ್ದಾರಿ ಎಂದು ಹೇಳಿದ್ದಳು.
0.52 ಸೆಕೆಂಡುಗಳ ಈ ವೀಡಿಯೊದಲ್ಲಿ ಯುವತಿ ತಾನು ಪಿನ್ಹಾತ್ (ಆಗ್ರಾ) ಮೂಲದ ಭಿಖಮ್ ಮಾವೈ ‘ವಿಕ್ಕಿ’ಯೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿದ್ದಾಳೆ. ಆದರೆ, ಕುಟುಂಬದ ಸದಸ್ಯರು ತನ್ನನ್ನು ಇನ್ನೋರ್ವ ಯುವಕನಿಗೆ ವಿಹಾಹ ಮಾಡಿ ಕೊಡಲು ನಿಶ್ಚಯಿಸಿದ್ದಾರೆ. ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ತನಗೆ ದಿನನಿತ್ಯ ಚಿತ್ರಹಿಂಸೆ ನೀಡುತ್ತಿದ್ದಾರೆ. ತಮ್ಮ ಇಚ್ಛೆಯಂತೆ ನಡೆಯದೇ ಇದ್ದರೆ, ಹತ್ಯೆಗೈಯುವುದಾಗಿ ಬೆದರಿಕೆ ಕೂಡ ಒಡ್ಡಿದ್ದಾರೆ ಎಂದು ಯುವತಿ ವೀಡಿಯೊದಲ್ಲಿ ಹೇಳಿದ್ದಾಳೆ.
ಈ ವೀಡಿಯೊ ಬಹಿರಂಗವಾದ ಬಳಿಕ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಯುವತಿ ಹಾಗೂ ಆಕೆಯ ತಂದೆಯನ್ನು ಪತ್ಯೇಕವಾಗಿ ಕರೆದು ಸಮಾಲೋಚನೆ ನಡೆಸಿದ್ದಾರೆ. ನಾರಿ ನಿಕೇತನಕ್ಕೆ ಸ್ಥಳಾಂತರಿಸುವುದಾಗಿ ಆಕೆಗೆ ತಿಳಿಸಿದ್ದಾರೆ. ಆದರೆ, ಯುವತಿ ನಿರಾಕರಿಸಿದ್ದಳು. ಇದಾದ ಕೆಲವು ಗಂಟೆಗಳ ಬಳಿಕ ಆಕೆಯ ತಂದೆ ಹಾಗೂ ಸೋದರ ಸಂಬಂಧಿ ಸಮಸ್ಯೆ ಬಗೆಹರಿಸುವ ನೆಪದಿಂದ ಆಕೆಯನ್ನು ಮನೆಯ ಕೊಠಡಿಯೊಂದಕ್ಕೆ ಕರೆದೊಯ್ದಿದ್ದಾರೆ ಹಾಗೂ ತೀರಾ ಸಮೀಪದಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.
ಮಗಳನ್ನು ಹತ್ಯೆಗೈದ ಬಳಿಕ ಆಕೆಯ ತಂದೆ ಮಹೇಶ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೆ, ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರ ಸೋದರಳಿಯ ರಾಹುಲ್ ಪರಾರಿಯಾಗಿದ್ದ. ಆದರೆ, ಕೆಲವು ಕಂಟೆಗಳ ಬಳಿಕ ಆತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಇಬ್ಬರಲ್ಲೂ ಇದ್ದ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.