ಮಧ್ಯಪ್ರದೇಶ: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇನ್ನೊಂದು ಚೀತಾ ಸಾವು
PC : PTI
ಹೊಸದಿಲ್ಲಿ: ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ(ಕೆಎನ್ಪಿ)ದಲ್ಲಿ ಇನ್ನೊಂದು ಚೀತಾ ಮಂಗಳವಾರ ಮೃತಪಟ್ಟಿದೆ. ಇದನ್ನು 2022, ಸೆಪ್ಟಂಬರ್ನಲ್ಲಿ ನಮೀಬಿಯಾದಿಂದ ತರಲಾಗಿತ್ತು.
2023ರಿಂದೀಚಿಗೆ ಆಫ್ರಿಕಾದಿಂದ ತರಲಾಗಿದ್ದ 20 ಚೀತಾಗಳ ಪೈಕಿ ಎಂಟು ಮತ್ತು ಭಾರತದಲ್ಲಿ ಜನಿಸಿದ್ದ ಐದು ಮರಿಗಳು ಕೆಎನ್ಪಿಯಲ್ಲಿ ಸಾವನ್ನಪ್ಪಿದ್ದು,ಈಗ 12 ವಯಸ್ಕ ಚೀತಾಗಳು ಮತ್ತು 12 ಮರಿಗಳು ಉಳಿದುಕೊಂಡಿವೆ.
ಕೆಎನ್ಪಿಯಲ್ಲಿ ಮುಕ್ತವಾಗಿ ತಿರುಗಾಡಿಕೊಂಡಿದ್ದ ಏಕೈಕ ಚೀತಾ ‘ಪವನ್’ ಪೊದೆಗಳ ನಡುವೆ ಕಾಲುವೆಯ ಅಂಚಿನಲ್ಲಿ ನಿಶ್ಚಲವಾಗಿ ಬಿದ್ದುಕೊಂಡಿದ್ದು ಪತ್ತೆಯಾಗಿತ್ತು. ಕಾಲುವೆ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದು,ಚೀತಾದ ತಲೆ ಸೇರಿದಂತೆ ಶರೀರದ ಅರ್ಧ ಭಾಗವು ನೀರಿನಲ್ಲಿತ್ತು. ಶರೀರದ ಮೇಲೆ ಎಲ್ಲಿಯೂ ಗಾಯಗಳಿರಲಿಲ್ಲ. ಅದು ನೀರಿನಲ್ಲಿ ಮುಳುಗಿ ಸತ್ತಿರಬಹುದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಹೆಚ್ಚಿನ ವಿವರಗಳು ತಿಳಿದು ಬರಲಿವೆ ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.
ಪವನ್ 2022ರಲ್ಲಿ ನಮೀಬಿಯಾದಿಂದ ತರಲಾಗಿದ್ದ ಮೊದಲ ತಂಡದಲ್ಲಿಯ ಎಂಟು ಚೀತಾಗಳಲ್ಲಿ ಒಂದಾಗಿತ್ತು. 2023ರಲ್ಲಿ ದಕ್ಷಿಣ ಆಫ್ರಿಕಾದಿಂದ ಚೀತಾಗಳ ಇನ್ನೊಂದು ತಂಡವನ್ನು ತರಲಾಗಿತ್ತು.
ಆವರಣದೊಳಗೆ ನಿಗದಿತ ಅವಧಿಯ ವಾಸದ ಬಳಿಕ ಮಾ. 2023ರಲ್ಲಿ ಪವನ್ ಚೀತಾವನ್ನು ಕಾಡಿಗೆ ಬಿಡಲಾಗಿತ್ತು. ಅದು ಆವರಣದಿಂದ ಹೊರಗೆ ಬಿಡಲಾದ ಮೊದಲ ಚೀತಾ ಆಗಿತ್ತು. ಬಿಡುಗಡೆಯ ಬಳಿಕ ಅದು 300 ಕಿ.ಮೀ.ಗೂ ಅಧಿಕ ದೂರವನ್ನು ಕ್ರಮಿಸಿತ್ತು ಎಂದು ಕೆಎನ್ಪಿಯ ಅನಾಮಿಕ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಆ.5ರಂದು ಕೆಎನ್ಪಿಯಲ್ಲಿ ಐದು ತಿಂಗಳು ಪ್ರಾಯದ ಚೀತಾ ಮರಿ ಮೃತಪಟ್ಟಿತ್ತು.