ಮಧ್ಯಪ್ರದೇಶ: ಪ್ರಾಂಶುಪಾಲರನ್ನು ಗುಂಡಿಕ್ಕಿ ಹತ್ಯೆಗೈದ 12ನೇ ತರಗತಿ ವಿದ್ಯಾರ್ಥಿ
ಸಾಂದರ್ಭಿಕ ಚಿತ್ರ |PC : freepik.com
ಭೋಪಾಲ: ಮಧ್ಯಪ್ರದೇಶದ ಛಾತರ್ಪುರದ ಶಾಲೆಯೊಂದರ ಪ್ರಾಂಶುಪಾಲರನ್ನು ವಿದ್ಯಾರ್ಥಿಯೋರ್ವ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.
ಧಾಮೋರಾ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಸುರೇಂದ್ರ ಕುಮಾರ್ ಸಕ್ಸೇನಾ (55) ಅವರು ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಸರಿಸುಮಾರು 5 ವರ್ಷಗಳಿಂದ ಈ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.
ಪ್ರಾಂಶುಪಾಲರನ್ನು ಹಿಂಬಾಲಿಸಿಕೊಂಡ ಬಂದ ವಿದ್ಯಾರ್ಥಿ ಅವರ ಮೇಲೆ ಶೌಚಾಲಯದಲ್ಲಿ ಗುಂಡು ಹಾರಿಸಿದ್ದಾನೆ. ಗುಂಡಿನ ಸದ್ದು ಕೇಳಿ ಕಚೇರಿಯಿಂದ ಸಿಬ್ಬಂದಿ ಧಾವಿಸಿ ಬಂದರು. ಈ ಸಂದರ್ಭ ಪ್ರಾಂಶುಪಾಲರ ಮೃತದೇಹ ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.
12 ತರಗತಿ ವಿದ್ಯಾರ್ಥಿಯಾಗಿರುವ ಆರೋಪಿ ಸಕ್ಸೇನಾ ಅವರ ದ್ವಿಚಕ್ರ ವಾಹನದ ಮೂಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೋರ್ವ ವಿದ್ಯಾರ್ಥಿ ಕೂಡ ಆತನ ಜೊತೆಗಿದ್ದ ಎಂದು ಪೊಲೀಸ್ ಅಧೀಕ್ಷಕ ಅಗಮ್ ಜೈನ್ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.