ಮಧ್ಯಪ್ರದೇಶ : ಮೇಲ್ಜಾತಿಯವರಿಗೆ ವಂದಿಸದ ದಲಿತ ವೃದ್ಧನಿಗೆ ಥಳಿತ
Photocredit: etvbharat.com
ಭೋಪಾಲ : ದೇಶದ ವಿವಿಧ ಭಾಗಗಳಲ್ಲಿ ಜಾತಿ ತಾರತಮ್ಯದ ಘಟನೆಗಳು ವರದಿಯಾಗುತ್ತಿರುವ ನಡುವೆಯೇ ಮಧ್ಯಪ್ರದೇಶದಲ್ಲಿ ಎರಡೂ ಕೈಗಳನ್ನು ಜೋಡಿಸಿ ತಮಗೆ ನಮಸ್ಕರಿಸದ್ದಕ್ಕಾಗಿ ಮೇಲ್ಜಾತಿಗೆ ಸೇರಿದ ಇಬ್ಬರು ವ್ಯಕ್ತಿಗಳು ದಲಿತ ವೃದ್ಧನೋರ್ವನನ್ನು ಹಿಗ್ಗಾಮುಗ್ಗಾ ಥಳಿಸಿ ಹಿಂಸಿಸಿರುವ ಘಟನೆ ನಡೆದಿದೆ.
ಮಾಧ್ಯಮ ವರದಿಗಳಂತೆ ಛತ್ತರ್ಪುರ ಉದಯಪುರ ಗ್ರಾಮದ ನಿವಾಸಿ ನಾಥುರಾಮ ಅಹಿರ್ವಾರ್ ಎನ್ನುವವರನ್ನು ಅದೇ ಗ್ರಾಮದ ಅಖಿಲೇಶ್ ದುಬೆ ಮತ್ತು ರಾಮಜಿ ಪಾಂಡೆ ಥಳಿಸಿದ್ದಾರೆ.
ತಾನು ಪಡಿತರ ಅಂಗಡಿಗೆ ತೆರಳುತ್ತಿದ್ದೆ. ಆರೋಪಿಗಳ ಮನೆ ಮುಂದಿನಿಂದಲೇ ತಾನು ಹಾದು ಹೋಗಬೇಕಾಗಿತ್ತು. ಪಡಿತರ ಅಂಗಡಿ ಮುಚ್ಚಿದ್ದರಿಂದ ಮನೆಗೆ ಮರಳುತ್ತಿದ್ದಾಗ ಆರೋಪಿಗಳು ಎದುರಾಗಿದ್ದರು. ಎರಡೂ ಕೈಗಳನ್ನು ಜೋಡಿಸಿ ತಮಗೆ ನಮಸ್ಕರಿಸುವ ಸಭ್ಯತೆಯಿಲ್ಲ ಎಂದು ತನ್ನನ್ನು ನಿಂದಿಸಿದ್ದ ಅವರು, ತನ್ನನ್ನು ಥಳಿಸಿ ಕಟ್ಟಿ ಹಾಕಿದ್ದರು ಎಂದು ನಾಥುರಾಮ ಹೇಳಿದ್ದನ್ನು ಮಾಧ್ಯಮಗಳು ಉಲ್ಲೇಖಿಸಿವೆ.
ಆರೋಪಿಗಳು ನಾಥುರಾಮರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡು ದೈಹಿಕ ಹಲ್ಲೆ ನಡೆಸಿದ್ದರು. ಕನಿಷ್ಠ ಮೂರು ಗಂಟೆಗಳ ಕಾಲ ಅವರಿಗೆ ಹಿಂಸೆ ನೀಡಲಾಗಿದ್ದು, ಜಾತಿ ನಿಂದನೆಗಳನ್ನು ಮಾಡಲಾಗಿತ್ತು. ಆರೋಪಿಗಳು ಅವರನ್ನು ಕಟ್ಟಿ ಹಾಕಿ ಅಂಗಾಲುಗಳಿಗೆ ಥಳಿಸಿದ್ದರು ಎಂದು ವರದಿಯಾಗಿದೆ.
ನಾಥುರಾಮ್ ಮತ್ತು ಅವರ ಕುಟುಂಬ ಸದಸ್ಯರು ಈ ಅನ್ಯಾಯದ ವಿರುದ್ಧ ಜಿಲ್ಲಾ ಪೋಲಿಸ್ ಅಧೀಕ್ಷಕರ ಮೊರೆ ಹೋಗಿದ್ದರು. ಅವರ ನಿರ್ದೇಶನದ ಮೇರೆಗೆ ಖಜುರಾಹೊ ಪೋಲಿಸರು ಆರೋಪಿಗಳ ವಿರುದ್ಧ ಐಪಿಸಿ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.