ಮಧ್ಯ ಪ್ರದೇಶ: ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳುತ್ತಿದ್ದ ಕರ್ನಾಟಕದ ರೈತರು ಪೊಲೀಸ್ ವಶಕ್ಕೆ
Photo: PTI
ಭೋಪಾಲ : ‘ದಿಲ್ಲಿ ಚಲೋ’ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ರೈಲಿನಲ್ಲಿ ತೆರಳುತ್ತಿದ್ದ ಕನಿಷ್ಠ 70 ರೈತರನ್ನು ಸರಕಾರಿ ರೈಲ್ವೆ ಪೊಲೀಸ್ (GRP) ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದಿಂದ ಸೋಮವಾರ ಮುಂಜಾನೆ ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಪರ್ಕ ಕ್ರಾಂತ್ರಿ ಎಕ್ಸ್ಪ್ರೆಸ್ ರೈಲಿನಲ್ಲಿ ದಿಲ್ಲಿಯತ್ತ ತೆರಳುತ್ತಿದ್ದ ರೈತರನ್ನು ಇಂದು ಮುಂಜಾನೆ ಬಲವಂತವಾಗಿ ಕೆಳಗಿಳಿಸಲಾಯಿತು ಹಾಗೂ ಜಿಲ್ಲಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ಜಿಆರ್ಪಿ ಅಧಿಕಾರಿ ತಿಳಿಸಿದ್ದಾರೆ.
‘‘ಒಟ್ಟು 70 ರೈತರನ್ನು ಭೋಪಾಲ ರೈಲು ನಿಲ್ದಾಣದಲ್ಲಿ ಮುಂಜಾನೆ 3 ಗಂಟೆಗೆ ಪೊಲೀಸರು ಬಂಧಿಸಿದರು. ಈ ಹಿನ್ನೆಲೆಯಲ್ಲಿ ನಾವು ಪ್ರತಿಭಟನೆ ನಡೆಸಿದೆವು’’ ಎಂದು ರೈತ ನಾಯಕ ಹಾಗೂ ಧಾರವಾಡ ಜಿಲ್ಲಾ ಕಾರ್ಯದರ್ಶಿ ಪರಶುರಾಮ ಎಟಿಂಗುಡ್ಡ ಅವರು ತಿಳಿಸಿದ್ದಾರೆ.
ಪೊಲೀಸರ ಕಾರ್ಯಾಚರಣೆ ಸಂದರ್ಭ ಓರ್ವ ಮಹಿಳೆ ಗಾಯಗೊಂಡಿದ್ದಾರೆ. ರೈತರ ಗುಂಪನ್ನು ರೈಲು ನಿಲ್ದಾಣದ ಹೊರಗೆ ವಶದಲ್ಲಿ ಇರಿಸಲಾಗಿತ್ತು. ಮುಖ್ಯವಾಗಿ ಅಸೌಖ್ಯ ಹೊಂದಿರುವವರಿಗೆ ಬಿಸಿ ನೀರಿನಂತಹ ಸೌಲಭ್ಯಗಳನ್ನು ನೀಡಿಲ್ಲ ಎಂದು ಎಟಿಂಗುಡ್ಡ ಅವರು ಹೇಳಿದರು.
ಮಂಗಳವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ದಿಲ್ಲಿಗೆ ರೈಲಿನಲ್ಲಿ ತೆರಲುತ್ತಿದ್ದ ಕರ್ನಾಟಕದ 100 ರೈತರನ್ನು ಭೋಪಾಲದಲ್ಲಿ ರಾಜ್ಯ ಪೊಲೀಸರು ತಡೆದಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ತಿಳಿಸಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್ಕೆಎಂ ದಕ್ಷಿಣ ಭಾರತ ಸಂಚಾಲಕ ಶಾಂತ ಕುಮಾರ್, ರೈಲಿನಲ್ಲಿ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದೆವು. ಪೊಲೀಸರು ನಮ್ಮನ್ನು ಭೋಪಾಲ್ ನಿಲ್ದಾಣದಲ್ಲಿ ತಡೆದರು ಎಂದಿದ್ದಾರೆ.
2021ರಲ್ಲಿ ಪ್ರತಿಭಟನೆಯನ್ನು ಹಿಂಪಡೆಯುವ ಸಂದರ್ಭ ನಿಗದಿಪಡಿಸಿದ ಷರತ್ತುಗಳಲ್ಲಿ ಒಂದಾಗಿರುವ ತಮ್ಮ ಉತ್ನನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖ್ಯವಾಗಿ ಉತ್ತರಪ್ರದೇಶ, ಹರ್ಯಾಣ ಹಾಗೂ ಪಂಜಾಬ್ನ ಹಲವು ರೈತ ಸಂಘಟನೆಗಳು ಫೆಬ್ರವರಿ 13ರಂದು ಪ್ರತಿಭಟನಾ ರ್ಯಾಲಿಗೆ ಕರೆ ನೀಡಿವೆ.