ಪ್ರಾಜೆಕ್ಟ್ ಚೀತಾ ಕುರಿತು ಮತ್ತೆ ಆರ್ಟಿಐ ಅರ್ಜಿಗೆ ಉತ್ತರಿಸಲು ನಿರಾಕರಿಸಿದ ಮಧ್ಯ ಪ್ರದೇಶ ಅರಣ್ಯ ಇಲಾಖೆ
ರಾಷ್ಟ್ರೀಯ ಭದ್ರತೆಯ ಕಾರಣ ನೀಡಿದ ಸರಕಾರ
ಸಾಂದರ್ಭಿಕ ಚಿತ್ರ (Photo: PTI)
ಭೋಪಾಲ್: ಪ್ರಾಜೆಕ್ಟ್ ಚೀತಾ ಕುರಿತು ಆರ್ಟಿಐ ಮೂಲಕ ಕೋರಲಾದ ಮಾಹಿತಿಯನ್ನು ಮಧ್ಯ ಪ್ರದೇಶ ಅರಣ್ಯ ಇಲಾಖೆ ಮತ್ತೆ ನಿರಾಕರಿಸಿದೆ ಹಾಗೂ ನಿರಾಕರಣೆಗೆ “ರಾಷ್ಟ್ರೀಯ ಸುರಕ್ಷತಾ ಕಳವಳಗಳು” ಎಂಬ ಕಾರಣ ನೀಡಿದೆ.
ಪ್ರಾಜೆಕ್ಟ್ ಚೀತಾ ನಿರ್ವಹಣೆ ಮತ್ತು ಹಣಕಾಸು ಸಂಬಂಧಿತ ಮಾಹಿತಿಯನ್ನು ಆರ್ಟಿಐ ಕಾರ್ಯಕರ್ತ ಅಜಯ್ ದುಬೆ ಕೋರಿದ್ದರು. ಆದರೆ ಅವರ ಎರಡನೇ ವಿನಂತಿಯನ್ನೂ ತಳ್ಳಿ ಹಾಕಲಾಗಿದೆ.
ಮುಂದೆ ಮಾಹಿತಿ ಆಯೋಗಕ್ಕೆ ಅಪೀಲು ಸಲ್ಲಿಸಲಾಗುವುದು ಮತ್ತು ರಾಜ್ಯ ಮುಖ್ಯ ಅರಣ್ಯಾಧಿಕಾರಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಅಜಯ್ ದುಬೆ ಹೇಳಿದ್ದಾರೆ.
ಚೀತಾ ಕುರಿತ ಮಾಹಿತಿಯೂ ರಾಷ್ಟ್ರೀಯ ಸುರಕ್ಷತೆಗೂ ಏನು ಸಂಬಂಧ ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಿಂದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 10 ಚೀತಾಗಳು ಮೃತಪಟ್ಟಿವೆ. ಅವುಗಳಲ್ಲಿ ನಾಲ್ಕು ಭಾರತದಲ್ಲಿಯೇ ಹುಟ್ಟಿದ ಚಿರತೆ ಮರಿಗಳಾಗಿವೆ.
Next Story