ಚೀತಾ ಯೋಜನೆ ಕುರಿತು RTI ಅಡಿ ಮಾಹಿತಿ ನೀಡಲು ನಿರಾಕರಿಸಿದ ಮಧ್ಯಪ್ರದೇಶ ಸರಕಾರ
Photo: PTI
ಭೋಪಾಲ್: ಆಫ್ರಿಕಾದಿಂದ ಕರೆ ತಂದಿರುವ ಚೀತಾಗಳು ಹಾಗೂ ಭಾರತದಲ್ಲಿ ಅವಕ್ಕೆ ಜನಿಸಿರುವ ಚೀತಾ ಮರಿಗಳ ಕುರಿತು ಮಾಹಿತಿ ನೀಡುವಂತೆ ಕೋರಿದ್ದ ವನ್ಯಜೀವಿ ಹೋರಾಟಗಾರ ಅಜಯ್ ದುಬೆ ಅವರ ಮಾಹಿತಿ ಹಕ್ಕು ಅರ್ಜಿ(RTI)ಯನ್ನು ಮಧ್ಯಪ್ರದೇಶದ ಅರಣ್ಯ ಇಲಾಖೆಯು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8(1)(ಎ) ಅಡಿ ತಳ್ಳಿ ಹಾಕಿದೆ.
ಈ ಸೆಕ್ಷನ್ ಪ್ರಕಾರ, ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ನ್ಯಾಯಾಂಗ ಪೂರ್ವದಲ್ಲಿ ಭಾರತದ ಸಮಗ್ರತೆಗೆ ಧಕ್ಕೆಯಾಗುವಂತಿದ್ದರೆ, ದೇಶದ ಭದ್ರತೆ, ವೈಜ್ಞಾನಿಕತೆ ಅಥವಾ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿಯಾಗುವಂತಿದ್ದರೆ ಅಥವಾ ಅಪರಾಧಕ್ಕೆ ಪ್ರಚೋದನೆ ನೀಡುವಂತಿದ್ದರೆ ಯಾವುದೇ ಸಾರ್ವಜನಿಕ ಪ್ರಾಧಿಕಾರವು ಮಾಹಿತಿಯನ್ನು ತಡೆ ಹಿಡಿಯಬಹುದಾಗಿದೆ.
ಕುನೊ ಹಾಗೂ ಮಂಡ್ಸೌರ್ ನಲ್ಲಿನ ಚೀತಾ ಯೋಜನೆಯ ನಿರ್ವಹಣಾ ಪತ್ರ ವ್ಯವಹಾರ ದಾಖಲೆಗಳನ್ನು ಒದಗಿಸುವಂತೆ ದುಬೆ ಅವರು ರಾಜ್ಯ ಅರಣ್ಯ ಇಲಾಖೆಯನ್ನು ಕೋರಿದ್ದರು.
ಈ ಅರ್ಜಿಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕಚೇರಿಯಲ್ಲಿನ ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಸೌರವ್ ಕುಮಾರ್ ಕಬ್ರ, “ಅರ್ಜಿಯಲ್ಲಿನ ಎರಡನೆ ಅಂಶದಡಿ ಕೋರಲಾಗಿರುವ ಮಾಹಿತಿಯು ನಿರ್ವಹಣಾ ಶಾಖೆಗೆ ಸಂಬಂಧಪಟ್ಟಿದ್ದು, ಆ ಶಾಖೆಯು ಮಾಹಿತಿ ಹಕ್ಕು ಕಾಯ್ದೆ, 2005ರ ಸೆಕ್ಷನ್ 8(1)(ಎ) ಅಡಿ ಈ ಮಾಹಿತಿಯನ್ನು ನೀಡದಿರಲು ನಿರ್ಧರಿಸಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸೆಪ್ಟೆಂಬರ್ 17, 2022ರಂದು ಚೀತಾ ಯೋಜನೆಯ ಭಾಗವಾಗಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ನಮೀಬಿಯಾ ಚೀತಾಗಳನ್ನು ತಂದು ಬಿಟ್ಟ ನಂತರ, ಇದೇ ಪ್ರಥಮ ಬಾರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿಯನ್ನು ನಿರಾಕರಿಸಲಾಗಿದೆ ಎಂದು ದುಬೆ ಆರೋಪಿಸಿದ್ದಾರೆ.
ಇದಕ್ಕೂ ಮುನ್ನ, ಭಾರತ ಭೂಪ್ರದೇಶದಲ್ಲಿ ಮೊದಲು ಜನಿಸಿದ್ದ ಚೀತಾ ಮರಿಯ ಆರೋಗ್ಯದ ಕುರಿತು ದುಬೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಸ್ವೀಕರಿಸಿದ್ದರು.
ನವೆಂಬರ್ 28, 2023ರಂದು ದುಬೆ ಸ್ವೀಕರಿಸಿದ್ದ ಆ ಮಾಹಿತಿಯ ಪ್ರಕಾರ, ಮರಿ ಚಿರತೆಯ ಬಲಗಾಲು ಮೂಳೆ ಮುರಿದಿತ್ತು.