ಬಿಜೆಪಿಗೆ ಕಮಲ್ ನಾಥ್ ಅಗತ್ಯವಿಲ್ಲ, ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದ ಮಧ್ಯಪ್ರದೇಶ ಸಚಿವ ಕೈಲಾಸ್ ವಿಜಯವರ್ಗೀಯ
ಕೈಲಾಸ್ ವಿಜಯವರ್ಗೀಯ, ಕಮಲ್ ನಾಥ್ | Photo: PTI
ಭೋಪಾಲ: ಕಾಂಗ್ರೆಸ್ ನ ಹಿರಿಯ ನಾಯಕ ಕಮಲ್ ನಾಥ್ ಅವರ ಮುಂದಿನ ರಾಜಕೀಯ ನಡೆಯ ಕುರಿತ ನಿಗೂಢತೆಯ ನಡುವೆ, ಮಧ್ಯಪ್ರದೇಶದ ಸಚಿವ ಕೈಲಾಸ್ ವಿಜಯವರ್ಗೀಯ, ‘‘ಬಿಜೆಪಿಗೆ ಕಮಲ್ ನಾಥ್ ಅವರ ಅಗತ್ಯ ಇಲ್ಲ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ’’ ಎಂದಿದ್ದಾರೆ.
ಕಮಲ್ ನಾಥ್ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘‘ನಮ್ಮ ಪಕ್ಷಕ್ಕೆ ಕಮಲ್ ನಾಥ್ ಅವರ ಅಗತ್ಯ ಇಲ್ಲ ಎಂದು ಹೇಳಿದ್ದೆ. ಆದುದರಿಂದಲೇ ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ’’ ಎಂದು ಇಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಮಲ್ ನಾಥ್ ಹಾಗೂ ಅವರ ಪುತ್ರ ನಕುಲ್ ನಾಥ್ ಅವರು ಕಳೆದ ವಾರ ದಿಲ್ಲಿ ತಲುಪಿದ ಬಳಿಕ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹರಡಿತ್ತು. ಆದರೆ, ಕಮಲ್ ನಾಥ್ ಅವರು ಬಿಜೆಪಿ ಸೇರಲಾರರು ಎಂದು ಸಜ್ಜನ್ ಸಿಂಗ್ ವರ್ಮಾ ಹೇಳಿದ್ದರು.
ಕಮಲ್ ನಾಥ್ ಅವರ ಮುಂದಿನ ರಾಜಕೀಯ ನಡೆಯ ಕುರಿತ ನಿಗೂಢತೆಯ ನಡುವೆ, ಅವರ ಭದ್ರಕೋಟೆಯಾದ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಿಂದ ಹಲವು ಸ್ಥಳೀಯ ನಾಯಕರು ಬುಧವಾರ ಬಿಜೆಪಿ ಸೇರಿದ್ದಾರೆ.