ಮಧ್ಯಪ್ರದೇಶ ನರ್ಸಿಂಗ್ ಕಾಲೇಜು ಹಗರಣ | ಪ್ರತಿ ಶೈಕ್ಷಣಿಕ ಸಂಸ್ಥೆಗಳಿಂದ 2-10 ಲಕ್ಷ ರೂ. ಲಂಚ ಪಡೆದ ಸಿಬಿಐ ಅಧಿಕಾರಿಗಳು!
CBI | PC : ANI
ಹೊಸದಿಲ್ಲಿ: ಮಧ್ಯಪ್ರದೇಶ ನರ್ಸಿಂಗ್ ಕಾಲೇಜು ಹಗರಣದಲ್ಲಿ ಪರಿಶೀಲನೆಯ ನಂತರ ಪೂರಕ ವರದಿ ನೀಡಲು ತನ್ನ ಅಧಿಕಾರಿಗಳು ಪ್ರತಿ ಶೈಕ್ಷಣಿಕ ಸಂಸ್ಥೆಯಿಂದ ರೂ. 2 ಲಕ್ಷದಿಂದ ರೂ. 10 ಲಕ್ಷದವರೆಗೆ ಲಂಚ ಸಂಗ್ರಹಿಸಿರುವುದು ಬಯಲಾಗಿದೆ ಎಂದು ಕೇಂದ್ರೀಯ ತನಿಖಾ ತಂಡ (ಸಿಬಿಐ) ಹೇಳಿದೆ.
ಈ ಸಂಬಂಧ ಸಿಬಿಐ ಉಪ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ಪ್ರಸಾದ್, ಮಧ್ಯಪ್ರದೇಶ ಪೊಲೀಸ್ ಇಲಾಖೆಯಿಂದ ಸಿಬಿಐಗೆ ನಿಯೋಜನೆಯ ಮೇಲೆ ಬಂದಿರುವ ಇನ್ಸ್ಪೆಕ್ಟರ್ಗಳಾದ ರಾಹುಲ್ ರಾಜ್ ಮತ್ತು ಸುಶೀಲ್ ಕುಮಾರ್ ಮಜೋಕಾ ಹಾಗೂ ರಿಷಿಕಾಂತ್ ಅಸಾಥೆ ಸೇರಿದಂತೆ ಒಟ್ಟು 22 ಮಂದಿ ಅಧಿಕಾರಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ರವಿವಾರ ಈ ಸಂಬಂಧ ರಾಹುಲ್ ರಾಜ್ರನ್ನು ಬಂಧಿಸಲಾಗಿದೆ.
ಸಿಬಿಐ ದಾಖಲಿಸಿಕೊಂಡಿರುವ ಪ್ರಾಥಮಿಕ ಮಾಹಿತಿ ವರದಿಯಲ್ಲಿ ನರ್ಸಿಂಗ್ ಕೋರ್ಸ್ ಶಿಕ್ಷಣವನ್ನು ನೀಡುತ್ತಿರುವ ಎಂಟು ಕಾಲೇಜುಗಳ ನಿರ್ದೇಶಕರು ಹಾಗೂ ಅಧ್ಯಕ್ಷರು ಹಾಗೂ ಪರಿಶೀಲನಾ ತಂಡದ ಪರವಾಗಿ ಲಂಚದ ಮೊತ್ತವನ್ನು ಸಂಗ್ರಹಿಸಿದ್ದ ಕಾಲೇಜು ಸಿಬ್ಬಂದಿ ಹಾಗೂ ಮಧ್ಯವರ್ತಿಗಳ ಹೆಸರಗಳೂ ಕಂಡು ಬಂದಿವೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಿಬಿಐ, "ಸಿಬಿಐ ದಾಖಲಿಸಿಕೊಂಡಿರುವ ಈ ಪ್ರಕರಣವು, ಸಿಬಿಐ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದೆ ಹಾಗೂ ಸಂಸ್ಥೆಯ ಪ್ರಧಾನ ಮೌಲ್ಯಗಳಿಂದ ವಿಮುಖರಾಗುವ ತನ್ನ ಅಧಿಕಾರಿಗಳಿಗೂ ತಪ್ಪಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದೆ" ಎಂದು ಹೇಳಿದೆ.
ಮಧ್ಯಪ್ರದೇಶ ಹೈಕೋರ್ಟ್ ಆದೇಶದ ಮೇರೆಗೆ ರಾಜ್ಯದಲ್ಲಿನ ನರ್ಸಿಂಗ್ ಕಾಲೇಜುಗಳನ್ನು ಪರಿಶೀಲನೆ ನಡೆಸಲು ತಂಡಗಳನ್ನು ಸಿಬಿಐ ರಚಿಸಿತ್ತು.