ಮಧ್ಯಪ್ರದೇಶ: ಅರಣ್ಯ ಹಕ್ಕುಗಳ ಹೋರಾಟಗಾರನ ಬಂಧನ ವಿರೋಧಿಸಿ ಬುಡಕಟ್ಟು ಜನರಿಂದ ಪ್ರತಿಭಟನೆ
Photocredit : newindianexpress.com
ಭೋಪಾಲ: ಮಧ್ಯಪ್ರದೇಶದಲ್ಲಿ ಬುರ್ಹಾನ್ಪುರ ಪೊಲೀಸರಿಂದ ಬುಡಕಟ್ಟು ಜನರ ಮೇಲೆ ನಿರಂತರ ದೌರ್ಜನ್ಯ ಹಾಗೂ ಅರಣ್ಯ ಹಕ್ಕು ಹೋರಾಟಗಾರ ನಿತಿನ್ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಬುಡಕಟ್ಟುಗೆ ಸೇರಿದ ಸಾವಿರಾರು ಜನರು ಭೋಪಾಲದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಕಳೆದ 10 ತಿಂಗಳಲ್ಲಿ 15 ಸಾವಿರ ಎಕರೆ ಅರಣ್ಯ ಭೂಮಿಯಲ್ಲಿದ್ದ ಮರಗಳನ್ನು ಟಿಂಬರ್ ಮಾಫಿಯಾ ಕಾನೂನು ಬಾಹಿರವಾಗಿ ಧರೆಗುರುಳಿಸಿರುವುದನ್ನು ವಿರೋಧಿಸಿ ಬುಡಕಟ್ಟು ಹಕ್ಕುಗಳ ಸಂಘಟನೆ ಜಾಗೃತಿ ಆದಿವಾಸಿ ದಲಿತ ಸಂಘಟನೆ (ಜೆಎಡಿಎಸ್) ಪ್ರತಿಭಟನೆ ನಡೆಸಿತು.
ಭೂಮಿ ಮೇಲಿನ ಹಕ್ಕು ಹಾಗೂ ಬಿದಿರು, ಜೇನು, ಮಯಣ, ಅರಗು, ತೆಂಡು ಎಲೆ, ವೈದ್ಯಕೀಯ ಗಿಡಗಳು ಸೇರಿದಂತೆ ಅರಣ್ಯದ ಸಣ್ಣಪುಟ್ಟ ಉತ್ಪನ್ನಗಳ ಹಕ್ಕು ನೀಡುವಂತೆ ಜೆಎಡಿಎಸ್ ಆಗ್ರಹಿಸಿದೆ.
ಜೆಎಡಿಎಸ್ನ ಕಾರ್ಯಕರ್ತರಾಗಿರುವ ನಿತಿನ್ ಅವರನ್ನು ಬುರ್ಹಾನ್ಪುರ ಪೊಲೀಸರು ಆಗಸ್ಟ್ 29ರಂದು ಬಂಧಿಸಿದ್ದಾರೆ. ಟಾಟಾ ಇನ್ಸ್ಟಿಟ್ಯೂಟ್ ಸೋಷಿಯಲ್ ಸಯನ್ಸಸ್ನ ಪದವೀಧರರಾಗಿರುವ ನಿತಿನ್ ಅವರು ಅರಣ್ಯ ಹಕ್ಕು ಕಾಯ್ದೆ-2005 ಹಾಗೂ ಇತರ ಸಾಂವಿಧಾನಿಕ ಹಕ್ಕುಗಳ ಕುರಿತು ಬುಡಕಟ್ಟು ಹಾಗೂ ದಲಿತರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
‘‘ಬುಡಕಟ್ಟು ಹಾಗೂ ದಲಿತ ಗುಂಪುಗಳಿಗೆ ಅರಣ್ಯ ಹಾಗೂ ಭೂಮಿ ಹಕ್ಕುಗಳ ಕುರಿತು ಕಾನೂನುಬದ್ಧ ಜಾಗೃತಿ ಕಾರ್ಯಕ್ರಮವನ್ನು ನಿತಿನ್ ಅವರು ನಡೆಸುತ್ತಿದ್ದಾರೆ’’ ಎಂದು ಜೆಎಡಿಎಸ್ನ ಹಿರಿಯ ಸದಸ್ಯೆ ಮಾಧುರಿ ಬೆಹನ್ ಹೇಳಿದ್ದಾರೆ.
ಪೊಲೀಸರು ಟಿಂಬರ್ ಮಾಫಿಯಾದವರೊಂದಿಗೆ ಶಾಮಿಲಾಗಿದ್ದಾರೆ ಎಂದು ಜೆಎಡಿಎಸ್ ಆರೋಪಿಸಿದೆ. ಆದರೆ, ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ‘‘ಟಿಂಬರ್ ಮಾಫಿಯಾದೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪವನ್ನು ನಾವು ತಿರಸ್ಕರಿಸುತ್ತೇವೆ’’ ಎಂದು ಬುರ್ಹಾನ್ಪುರದ ಪೊಲೀಸ್ ಅಧೀಕ್ಷಕ ದೇವೇಂದ್ರ ಪಾಟೀದಾರ್ ಹೇಳಿದ್ದಾರೆ. ‘‘ಈ ವರ್ಷ ಮಾರ್ಚ್ನಲ್ಲಿ ಗುಂಪನ್ನು ಪ್ರಚೋದಿಸುವ ಮೂಲಕ ಪೊಲೀಸರ ವಿರುದ್ಧ ಪಿತೂರಿ ನಡೆಸಿದ ಹಳೆಯ ಪ್ರಕರಣವೊಂದಕ್ಕೆ ನಿತಿನ್ ಅವರನ್ನು ನಾವು ಬಂಧಿಸಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.
ನಿರಂತರ ಅರಣ್ಯ ನಾಶದ ಕುರಿತಂತೆ ಜೆಎಡಿಎಸ್ ಬ್ಯಾನರ್ ಅಡಿಯಲ್ಲಿ ಮಾರ್ಚ್ 2ರಂದು ಬುಡಕಟ್ಟು ಜನರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಅರಣ್ಯ ಅಧಿಕಾರಿಗಳು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ನಾಲ್ವರು ಬುಡಕಟ್ಟು ಪ್ರತಿಭಟನಕಾರರನ್ನು ಅವರ ಮನೆಯಿಂದ ಅರಣ್ಯ ಸಿಬ್ಬಂದಿ ಬಂಧಿಸಿದ್ದರು.
ಪ್ರತಿಭಟನಾ ಸ್ಥಳದಲ್ಲಿ ನಿತಿನ್ ಇಲ್ಲದಿದ್ದರೂ ಅವರ ಹೆಸರನ್ನು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಧುರಿ ಹೇಳಿದ್ದಾರೆ.
ಈ ಘಟನೆ ಬಳಿಕ ಬುಡಕಟ್ಟು ಜನರು ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಇನ್ನೊಂದು ಘರ್ಷಣೆ ನಡೆಯಿತು. ಈ ಘರ್ಷಣೆಗೆ ಸಂಬಂಧಿಸಿ 15 ಮಹಿಳೆಯರು ಸೇರಿದಂತೆ 35 ಬುಡಕಟ್ಟು ಮಹಿಳೆಯರನ್ನು ಬಂಧಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.