ಮಧ್ಯ ಪ್ರದೇಶ | ಪ್ರಧಾನಿ ರೋಡ್ ಶೋ ಸಂದರ್ಭ ವೇದಿಕೆ ಕುಸಿತ ; ಓರ್ವ ಪೊಲೀಸ್ ಸಿಬ್ಬಂದಿ ಸಹಿತ ಕನಿಷ್ಠ ನಾಲ್ವರಿಗೆ ಗಾಯ
PC : PTI
ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರ ಪ್ರದೇಶದಲ್ಲಿ ರವಿವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯ ಸಂದರ್ಭ ವೇದಿಕೆ ಕುಸಿದು ಓರ್ವ ಪೊಲೀಸ್ ಸೇರಿದಂತೆ ಕನಿಷ್ಠ ನಾಲ್ಕು ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಜಬಲ್ಪುರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಧ್ಯಪ್ರದೇಶದ ಸಚಿವ ರಾಕೇಶ್ ಸಿಂಗ್ ಆಸ್ಪತ್ರೆಗೆ ತೆರಳಿ ಗಾಯಗೊಂಡವರನ್ನು ಭೇಟಿಯಾಗಿದ್ದಾರೆ.
‘‘ಇಂದಿನ ರೋಡ್ ಶೋನಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ವೇದಿಕೆಯ ಮೇಲೆ ತುಂಬಾ ಜನರಿದ್ದರು. ಇದರಿಂದ ವೇದಿಕೆ ಕುಸಿಯಿತು. ಕೂಡಲೇ ಅಲ್ಲಿಂದ ತೆರಳುವಂತೆ ಪ್ರಧಾನಿ ಅವರು ನನಗೆ ಹೇಳಿದರು. ಅಲ್ಲದೆ, ಪ್ರತಿಯೊಬ್ಬರನ್ನೂ ಸೂಕ್ತ ರೀತಿಯಲ್ಲಿ ನೋಡಿಕೊಳ್ಳುವಂತೆ ಸೂಚಿಸಿದರು. ನಾನು ಗಾಯಗೊಂಡವರನ್ನು ಹಾಗೂ ಹಾಗೂ ಅವರ ಕುಟುಂಬಗಳನ್ನು ಭೇಟಿಯಾಗಿದ್ದೇನೆ. ಪ್ರತಿಯೊಬ್ಬರೂ ಆರೋಗ್ಯವಾಗಿದ್ದಾರೆ. ಗಾಯಗೊಂಡ ಕೆಲವರಿಗೆ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಅವರ ಮನೆಗೆ ಕಳುಹಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.
‘‘ಪ್ರಧಾನಿ ಮೋದಿ ಅವರ ರ್ಯಾಲಿ ಹಾದು ಹೋದ ಬಳಿಕ ಶೋರೂಮ್ನ ಸಮೀಪ ನಿರ್ಮಿಸಲಾಗಿದ್ದ ವೇದಿಕೆ ಜನದಟ್ಟಣೆಯಿಂದ ಕುಸಿಯಿತು. ಇದರಿಂದ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಮೂವರು ಗಾಯಗೊಂಡರು. ಎಲ್ಲರನ್ನೂ ಚಿಕಿತ್ಸೆಗಾಗಿ ಜಬಲ್ಪುರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ’’ ಎಂದು ಜಬಲ್ಪುರದ ಪೊಲೀಸ್ ಅಧಿಕಾರಿ ದಿಲೀಪ್ ಶ್ರೀವಾತ್ಸವ್ ಹೇಳಿದ್ದಾರೆ.