ಮಧ್ಯಪ್ರದೇಶ |ಎನ್ಕೌಂಟರ್ ನಲ್ಲಿ ಇಬ್ಬರು ನಕ್ಸಲೀಯರು ಸಾವು
ಸಾಂದರ್ಭಿಕ ಚಿತ್ರ | Photo: NDTV
ಭೋಪಾಲ : ಮಧ್ಯಪ್ರದೇಶ ಪೊಲೀಸ್ ನ ನಕ್ಸಲ್ ವಿರೋಧಿ ಪಡೆ ರಾಜ್ಯದ ಬಾಲಾಘಾಟ್ ಜಿಲ್ಲೆಯಲ್ಲಿ ನಡೆಸಿದ ಎನ್ಕೌಂಟರ್ ನಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ.
ಇವರಿಬ್ಬರ ತಲೆಗಳಿಗೆ ಒಟ್ಟು 43 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಾಘಾಟ್ನ ಲಾಂಜಿ ಪೊಲೀಸ್ ಠಾಣಾ ವ್ಯಾಪ್ತಿಯ ಖೆರೆಝಾರಿ ಗ್ರಾಮದ ಸಮೀಪದ ಅರಣ್ಯದಲ್ಲಿ ಸೋಮವಾರ ತಡ ರಾತ್ರಿ ಎನ್ಕೌಂಟರ್ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲ್ ನಿಗ್ರಹ ಪಡೆ ಹತ ನಕ್ಸಲೀಯರಲ್ಲಿದ್ದ ಎ.ಕೆ. 47 ರೈಫಲ್ಸ್, 12 ಬೋರ್ ರೈಫಲ್, ಸ್ಫೋಟಕ ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಕೌಂಟರ್ ನಲ್ಲಿ ಹತರಾದ ಮಹಿಳೆಯನ್ನು ಸಜಂತಿ ಆಲಿಯಾಸ್ ಕ್ರಾಂತಿ ಎಂದು ಗುರುತಿಸಲಾಗಿದೆ. ಇವರ ತಲೆಗೆ 29 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಹತರಾದ ಇನ್ನೋರ್ವ ನಕ್ಸಲೀಯನನ್ನು ಶೇರ್ ಸಿಂಗ್ ಆಲಿಯಾಸ್ ರಘು ಎಂದು ಗುರುತಿಸಲಾಗಿದೆ. ಈತನ ತಲೆಗೆ 14 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಇಬ್ಬರೂ ನಕ್ಸಲೀಯರು ಮಧ್ಯಪ್ರದೇಶ, ಚತ್ತೀಸ್ ಗಢ ಹಾಗೂ ಮಹಾರಾಷ್ಟ್ರದಲ್ಲಿ ಹಲವು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.