ಗಾಯಕ ಟಿಎಂ ಕೃಷ್ಣಗೆ ʼಎಂಎಸ್ ಸುಬ್ಬುಲಕ್ಷ್ಮಿʼ ಹೆಸರಿನಲ್ಲಿ ಪ್ರಶಸ್ತಿ ನೀಡದಂತೆ ಮದ್ರಾಸ್ ಹೈಕೋರ್ಟ್ ನಿರ್ಬಂಧ
ಟಿಎಂ ಕೃಷ್ಣ (Photo: PTI)
ಹೊಸದಿಲ್ಲಿ: ಸಂಗೀತಗಾರ ಟಿಎಂ ಕೃಷ್ಣ ಅವರಿಗೆ ಎಂಎಸ್ ಸುಬ್ಬುಲಕ್ಷ್ಮಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದಕ್ಕೆ ಮದ್ರಾಸ್ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಸಂಗೀತಗಾರ ಟಿ ಎಂ ಕೃಷ್ಣ ಅವರಿಗೆ ಎಂ ಎಸ್ ಸುಬ್ಬುಲಕ್ಷ್ಮಿ ಅವರ ಹೆಸರಿನಲ್ಲಿ 'ಸಂಗೀತ ಕಲಾನಿಧಿ ಪ್ರಶಸ್ತಿ' ನೀಡದಂತೆ ಮದ್ರಾಸ್ ಹೈಕೋರ್ಟ್ ʼದಿ ಹಿಂದೂ ಪತ್ರಿಕೆʼಗೆ ನಿರ್ಬಂಧ ವಿಧಿಸಿದೆ.
ಸಂಗೀತ ಕಲಾನಿಧಿ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ಟಿಎಂ ಕೃಷ್ಣ ಅವರಿಗೆ ನೀಡಬಹುದು ಆದರೆ ಎಂಎಸ್ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ನೀಡಬಾರದು ಎಂದು ಕೋರ್ಟ್ ಹೇಳಿದೆ. ಎಂಎಸ್ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರ ಪೀಠವು ಈ ಮಧ್ಯಂತರ ಆದೇಶವನ್ನು ನೀಡಿದೆ.
ಸಂಗೀತ ಕಲಾನಿಧಿ ಎಂಎಸ್ ಸುಬ್ಬುಲಕ್ಷ್ಮಿ ಪ್ರಶಸ್ತಿಯನ್ನು ದಿ ಹಿಂದೂ ಗ್ರೂಪ್ ನೀಡುತ್ತಿದೆ. ದಿವಂಗತ ಗಾಯಕಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ “ಸಂಗೀತ ಕಲಾನಿಧಿ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ವರ್ಷ ಟಿಎಂ ಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದಾಗಿ ದಿ ಹಿಂದೂ ಗ್ರೂಪ್ ಘೋಷಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ ಶ್ರೀನಿವಾಸನ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೃಷ್ಣ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುಬ್ಬುಲಕ್ಷ್ಮಿ ಅವರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾರೆ ಮತ್ತು ದಿವಂಗತ ಗಾಯಕಿಯ ಖ್ಯಾತಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಪ್ರಶಸ್ತಿ ಪ್ರದಾನವು ಸುಬ್ಬುಲಕ್ಷ್ಮಿ ಅವರ ಆಶಯ ಮತ್ತು ಆದೇಶಕ್ಕೆ ವಿರುದ್ಧವಾಗಿದೆ ಎಂದು ಕೋರ್ಟ್ ನಲ್ಲಿ ಅವರು ವಾದಿಸಿದ್ದರು.