ಆನ್ ಲೈನ್ ರಮ್ಮಿ, ಪೋಕರ್ ಮೇಲಿನ ನಿಷೇಧ ತೆರವುಗೊಳಿಸಿದ ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್ (PTI)
ಚೆನ್ನೈ: ತಮಿಳುನಾಡು ಆನ್ ಲೈನ್ ಜೂಜು ನಿಷೇಧ ಮತ್ತು ಆನ್ ಲೈನ್ ಆಟಗಳ ನಿಯಂತ್ರಣ ಕಾಯ್ದೆ, 2022 ಸಂಪೂರ್ಣವಾಗಿ ಸಂವಿಧಾನಾತೀತವಾಗಿದೆ ಎಂದು ಘೋಷಿಸಲು ಗುರುವಾರ ನಿರಾಕರಿಸಿರುವ ಮದ್ರಾಸ್ ಹೈಕೋರ್ಟ್, ರಮ್ಮಿ ಮತ್ತು ಪೋಕರ್ ಗಳು ಕೌಶಲ ಆಟಗಳು ಎಂಬ ವಾದವನ್ನು ಮಾನ್ಯ ಮಾಡಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಾಯ್ದೆಯಲ್ಲಿನ ನಿಷೇಧಿತ ಆಟಗಳ ಪಟ್ಟಿಯಲ್ಲಿ ರಮ್ಮಿ ಮತ್ತು ಪೋಕರ್ ಅದೃಷ್ಟದಾಟಗಳು ಎಂದು ಸೇರ್ಪಡೆ ಮಾಡಲಾಗಿರುವ ಪರಿಚ್ಛೇದವನ್ನು ಅದು ಬದಿಗಿರಿಸಿತು.
ಆನ್ ಲೈನ್ ಜೂಜಾಟದಲ್ಲಿ ಹಣ ಕಳೆದುಕೊಂಡ ಕಾರಣಕ್ಕೆ ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವು ಆನ್ ಲೈನ್ ಜೂಜಾಟವನ್ನು ನಿಷೇಧಿಸುವ ಶಾಸನವನ್ನು ಪರಿಚಯಿಸಿತ್ತು.
ಮುಖ್ಯ ನ್ಯಾಯಮೂರ್ತಿ ಎಸ್.ವಿ.ಗಂಗಪುರ್ವಾಲಾ ಮತ್ತು ನ್ಯಾ. ಪಿ.ಡಿ.ಆದಿಕೇಸವಲು ಅವರನ್ನು ಒಳಗೊಂಡಿದ್ದ ಈ ಮೊದಲಿನ ನ್ಯಾಯಪೀಠವು, ಕಾಯ್ದೆಯನ್ನು ಪ್ರಶ್ನಿಸಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಆನ್ ಲೈನ್ ಕ್ರೀಡಾ ಕಂಪನಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಭಾಗಶಃ ಅಂಗೀಕರಿಸಿತ್ತು.
“ಕಾಯ್ದೆಯು ಸಂಪೂರ್ಣವಾಗಿ ಅಧಿಕಾರಾತೀತ ಎಂದು ಹೇಳಲು ಬರುವುದಿಲ್ಲ. ಸರ್ಕಾರವು ಅದೃಷ್ಟದಾಟದಂಥ ಆನ್ ಲೈನ್ ಆಟಗಳನ್ನು ನಿಷೇಧಿಸುವ ಶಾಸನ ರೂಪಿಸುವ ಅಧಿಕಾರವನ್ನು ಹೊಂದಿದೆ. ಇದೇ ಸಮಯದಲ್ಲಿ ಆನ್ ಲೈನ್ ಕೌಶಲ ಆಟಗಳನ್ನು ನಿಯಂತ್ರಿಸುವ ಅಧಿಕಾರವನ್ನೂ ಹೊಂದಿದೆ. ಆರೋಪಕ್ಕೀಡಾಗಿರುವ ಕಾಯ್ದೆಯ ಸೆಕ್ಷನ್ 2(i)ರಲ್ಲಿ ನಮೂದಿಸಿರುವ ಆನ್ ಲೈನ್ ಜೂಜಾಟದ ವ್ಯಾಖ್ಯಾನವು ಅದೃಷ್ಟದಾಟಕ್ಕೆ ಸೀಮಿತವಾಗಬೇಕೇ ಹೊರತು ಕೌಶಲವನ್ನು ಒಳಗೊಂಡಿರುವ ಆಟಗಳನ್ನೂ ಒಳಗೊಳ್ಳಬಾರದು. ಪೋಕರ್ ಮತ್ತು ರಮ್ಮಿ ಆಟಗಳು ಕಾರ್ಡ್ ಗಳ ಆಟವಾಗಿದ್ದರೂ, ಅವು ಕೌಶಲದ ಆಟಗಳಾಗಿವೆ” ಎಂದು ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.
ಇದೇ ವೇಳೆ, ಈ ಪ್ರಕರಣದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆಯಾಗಿರುವ ಕುರಿತು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದೂ ನ್ಯಾಯಪೀಠವು ಹೇಳಿದೆ.