52 ಎಫ್ಐಆರ್ ದಾಖಲಾಗಿರುವ ಬಿಜೆಪಿ ನಾಯಕನಿಗೆ ಪೊಲೀಸ್ ಭದ್ರತೆ ನೀಡಲು ನಿರಾಕರಿಸಿದ ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್ | Photo: PTI
ಚೆನ್ನೈ: ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗಳಿಗೆ ಖಾಸಗಿ ಭದ್ರತಾಧಿಕಾರಿಗಳನ್ನು ಒದಗಿಸುವಂತೆ ಪೊಲೀಸರಿಗೆ ಸೂಚಿಸತೊಡಗಿದರೆ ನ್ಯಾಯಾಂಗವು ಸಮಾಜದ ವಿಶ್ವಾಸ ಕಳೆದುಕೊಳ್ಳುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಇತ್ತೀಚೆಗೆ ತನಗೆ ಪೊಲೀಸ್ ಭದ್ರತೆಯ ಅಗತ್ಯವಿದೆ ಎಂದು ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ತಮಿಳುನಾಡು ಬಿಜೆಪಿಯ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಕಾರ್ಯದರ್ಶಿಯಾಗಿರುವ ಕೆ.ವೆಂಕಟೇಶ್ ಎಂಬುವವರು ಪೊಲೀಸ್ ಭದ್ರತೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಎಪ್ರಿಲ್ 1 ರಂದು ನ್ಯಾ. ಆನಂದ್ ವೆಂಕಟೇಶ್ ವಜಾಗೊಳಿಸಿದರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅರ್ಜಿದಾರರ ಸಂಬಂಧಿಯೊಬ್ಬರು ಅಪರಿಚಿತ ವ್ಯಕ್ತಿಗಳಿಂದ ಹತ್ಯೆಗೈಡಾಗಿದ್ದರು. ಇದಾದ ನಂತರ ಅರ್ಜಿದಾರ ವೆಂಕಟೇಶ್ ಗೂ ಬೆದರಿಕೆಯ ಕರೆಗಳು ಬಂದಿದ್ದವು. ಗನ್ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದ ವೆಂಕಟೇಶ್, ಅದನ್ನು ಪಡೆಯುವಲ್ಲೂ ಯಶಸ್ವಿಯಾಗಿದ್ದರು. ಇದಾದ ನಂತರ ಅವರು ಪೊಲೀಸರನ್ನು ಭೇಟಿಯಾಗಿ ನನಗೆ ವೈಯಕ್ತಿಕ ಭದ್ರತಾಧಿಕಾರಿಯನ್ನು ಒದಗಿಸಬೇಕು ಎಂದು ಮನವಿ ಮಾಡಿದ್ದರು. ಆದರೆ, ಸ್ವತಃ ವೆಂಕಟೇಶ್ ಗೆ ಕ್ರಿಮಿನಲ್ ಹಿನ್ನಲೆ ಇದ್ದುದರಿಂದ ರಾಜ್ಯ ಪೊಲೀಸರು ಆತನ ಬೇಡಿಕೆಯನ್ನು ವಿರೋಧಿಸಿದ್ದರು. ಈ ಎಲ್ಲ ಅಂಶಗಳನ್ನೂ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಈ ಸಂಬಂಧ ನ್ಯಾಯಾಲಯಕ್ಕೆ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಿದ್ದ ಪೊಲೀಸರು, ವೆಂಕಟೇಶ್ ವಿರುದ್ಧ ಸುಮಾರು 52 FIRಗಳು ದಾಖಲಾಗಿದ್ದು, ಈ ಪೈಕಿ 49 FIRಗಳು ಆಂಧ್ರ ಪ್ರದೇಶದಲ್ಲಿ ಹಾಗೂ 3 FIRಗಳು ತಮಿಳುನಾಡಿನಲ್ಲಿ ದಾಖಲಾಗಿವೆ ಎಂದು ಮಾಹಿತಿ ನೀಡಿದ್ದರು.
ಪೊಲೀಸರ ವಸ್ತು ಸ್ಥಿತಿ ವರದಿಯಲ್ಲಿ ವೆಂಕಟೇಶ್ ಗೆ ರೌಡಿ ಶೀಟರ್ ಇತಿಹಾಸವಿದೆ ಎಂಬ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯವು, ಅವರ ಅರ್ಜಿಯನ್ನು ವಜಾಗೊಳಿಸಿತು. ವೆಂಕಟೇಶ್ ಜೀವಕ್ಕಿರುವ ಬಹುತೇಕ ಬೆದರಿಕೆಯು ಅವರ ಸ್ವಯಂ ಕೃತ್ಯದ ಫಲ ಎಂದೂ ನ್ಯಾಯಾಲಯ ಹೇಳಿತು.
ಅರ್ಜಿದಾರ ವೆಂಕಟೇಶ್ ಪರವಾಗಿ ನಿತ್ಯೇಶ್ ನಟರಾಜ್ ಹಾಗು ಅನಿರುದ್ಧ್ ಎ.ಎಸ್.ಶ್ರೀ ರಾಮ್ ಹಾಜರಿದ್ದರೆ, ಪ್ರತಿ ವಾದಿ ರಾಜ್ಯ ಸರಕಾರದ ಪರವಾಗಿ ಹೆಚ್ಚುವರಿ ಸಾರ್ವಜನಿಕ ಅಭಿಯೋಜಕ ಎ.ದಾಮೋದರನ್ ಹಾಜರಿದ್ದರು.