ಮಹಾಕುಂಭಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಸುಳ್ಳು ಪೋಸ್ಟ್ : 34 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಪ್ರಕರಣ ದಾಖಲು

Photo | PTI
ಪ್ರಯಾಗ್ರಾಜ್: ಬಾಂಗ್ಲಾದೇಶದಲ್ಲಿ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯ ಹಳೆಯ ವೀಡಿಯೊವನ್ನು ಮಹಾ ಕುಂಭಕ್ಕೆ ಲಿಂಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರದ ಪೋಸ್ಟ್ ಹಂಚಿಕೊಂಡ ಆರೋಪದಲ್ಲಿ 34 ಖಾತೆಗಳ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಶನಿವಾರ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 2022ರಲ್ಲಿ ಬಾಂಗ್ಲಾದೇಶದ ಪರ್ಬತ್ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿಯ ವೀಡಿಯೊವನ್ನು ಹಂಚಿಕೊಂಡು ʼಫೆಬ್ರವರಿ 14ರಂದು ಮಹಾ ಕುಂಭಕ್ಕೆ ಹೋಗುವ ರೈಲಿನಲ್ಲಿ 300 ಜನರು ಮೃತಪಟ್ಟಿದ್ದಾರೆʼ ಎಂದು ಸುಳ್ಳು ಸುದ್ದಿಯನ್ನು ಫೋಸ್ಟ್ ಮಾಡಲಾಗಿದೆ.
ಈ ವೀಡಿಯೊವನ್ನು ಪರಿಶೀಲಿಸಿದ ಪೊಲೀಸರು, ಇದು ಬಾಂಗ್ಲಾದೇಶದಲ್ಲಿ ನಡೆದ ಹಳೆಯ ಘಟನೆಯ ವೀಡಿಯೊ ಎಂದು ದೃಢಪಡಿಸಿದ್ದಾರೆ. ವದಂತಿಗಳನ್ನು ಹರಡಿರುವ 34 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಾಕುಂಭಮೇಳ ಆರಂಭವಾದಾಗಿನಿಂದ ಈವರೆಗೆ ಸುಳ್ಳು ಸುದ್ದಿ ಪೋಸ್ಟ್ ಮಾಡುತ್ತಿದ್ದ 171 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.