ಮಹಾ ಕುಂಭಮೇಳದಲ್ಲಿ ಕಾಲ್ತುಳಿತ | ಹಲವರು ಇನ್ನೂ ನಾಪತ್ತೆ

PC : PTI
ಪ್ರಯಾಗರಾಜ್ : ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ಎರಡು ದಿನಗಳು ಕಳೆದಿದ್ದರೂ ಜಿತೇಂದ್ರ ಸಾಹು ಆಗಿನಿಂದಲೂ ನಾಪತ್ತೆಯಾಗಿರುವ ತನ್ನ ಚಿಕ್ಕಮ್ಮ ಶಕುಂತಲಾ ದೇವಿ(70)ಗಾಗಿ ಊಟ-ನಿದ್ರೆ ಬಿಟ್ಟು ಹುಡುಕುತ್ತಿದ್ದಾರೆ.
ದೇವಿ ಗ್ವಾಲಿಯರ್ನಿಂದ 15 ಭಕ್ತರ ಗುಂಪಿನೊಂದಿಗೆ ಬಂದಿದ್ದರು.
‘ಘಟನೆ ನಡೆದಾಗಿನಿಂದ ನಮಗೆ ಚಿಕ್ಕಮ್ಮನ ಸಂಪರ್ಕವಿಲ್ಲ. ಅವರು ಕುತ್ತಿಗೆಗೆ ಗುರುತಿನ ಚೀಟಿಯನ್ನು ನೇತು ಹಾಕಿಕೊಂಡಿದ್ದರು. ಅವರ ಫೋನ್ ಸಂಪರ್ಕವೂ ಸಾಧ್ಯವಾಗುತ್ತಿಲ್ಲ,ಅವರು ಯಾರನ್ನೂ ಸಂಪರ್ಕಿಸಿಯೂ ಇಲ್ಲ. ಏನು ಮಾಡಬೇಕು ಎಂದು ನಮಗೆ ತೋಚುತ್ತಿಲ್ಲ’ ಎಂದು ಸಾಹು ಗದ್ಗದಿತರಾಗಿ ಸುದ್ದಿಸಂಸ್ಥೆಗೆ ತಿಳಿಸಿದರು.
ಜಿತೇಂದ್ರರಂತಹ ಹಲವಾರು ಕುಟುಂಬಗಳು ತಮ್ಮವರಿಗಾಗಿ ಹತಾಶ ಹುಡುಕಾಟವನ್ನು ಮುಂದುವರಿಸಿವೆ. ನಾಪತ್ತೆಯಾಗಿದ್ದ ಕೆಲವರು ತಮ್ಮ ಕುಟುಂಬಗಳೊಂದಿಗೆ ಪುನರ್ಮಿಲನದ ಭಾಗ್ಯ ಪಡೆದಿದ್ದರೆ ಹಲವರು ಈಗಲೂ ಕಾಣೆಯಾಗಿದ್ದಾರೆ,ಇವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
‘ನನ್ನ ತಾಯಿ ಫೂಲಿ ನಿಷಾದ್ ಮೌನಿ ಅಮವಾಸ್ಯೆಯ ಸಂಜೆ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ಜೊತೆಯಲ್ಲಿದ್ದ ಕುಟುಂಬ ಸದಸ್ಯರಿಂದ ತಪ್ಪಿಸಿಕೊಂಡಿದ್ದಾರೆ. ಆಗಿನಿಂದ ನಮಗೆ ಅವರ ಸಂಪಕವಿಲ್ಲ’ ಎಂದು ಅಹ್ಮದಾಬಾದ್ನ ರಾಜೇಶ ನಿಷಾದ್ ಅಳಲು ತೋಡಿಕೊಂಡರು.
ಏಳೆಂಟು ಬಂಧುಗಳೊಂದಿಗೆ ಬಂದಿದ್ದ ಬನಾರಸ ನಿವಾಸಿ ಮಾಯಾ ಸಿಂಗ್ ಅವರದ್ದೂ ಇದೇ ಕಥೆ. ವ್ಯಾಪಕ ವಿಚಾರಣೆ ಮತ್ತು ಶೋಧಗಳ ಬಳಿಕವೂ ನಮಗೆ ಅವರನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಮಾಯಾ ಸಿಂಗ್ ಪತಿ ಜನಾರ್ಧನ ಸಿಂಗ್ ಹೇಳಿದರು.
ಹಲವು ಕುಟುಂಬಗಳ ಆತಂಕದ ಕಾಯುವಿಕೆ ಮುಂದುವರಿದಿದ್ದರೆ ಒಡಿಶಾದ ರೇಣು ಲತಾ,ಅಲಿಗಡದ ಸ್ನೇಹಲತಾರಂತಹ ಕೆಲವು ಅದೃಷ್ಟವಂತರು ತಮ್ಮ ಪ್ರೀತಿಪಾತ್ರರನ್ನು ಮತ್ತೆ ಸೇರಿಕೊಂಡಿದ್ದಾರೆ.
ತಮ್ಮೊಂದಿಗೆ ಬಂದಿದ್ದ ಗುಂಪುಗಳ ಸಂಪರ್ಕ ಕಳೆದುಕೊಂಡಿರುವ ಕೆಲವರು ಒಂಟಿಯಾಗಿ ತಮ್ಮ ಮನೆಗಳಿಗೆ ಮರಳಲು ಹರಸಾಹಸ ಪಡುತ್ತಿದ್ದಾರೆ. ಇವರಲ್ಲಿ ಉತ್ತರ ಪ್ರದೇಶ ಕುಶಿನಗರದ ವೃದ್ಧ ದಂಪತಿ ರಾಮ ಸನೇಹಿ ಮತ್ತು ಬಿಟ್ಟಾ ದೇವಿ ಸೇರಿದ್ದಾರೆ.
ಕಾಣೆಯಾಗಿರುವವರನ್ನು ಪತ್ತೆ ಹಚ್ಚಲು ಭಾರತ ಸೇವಾ ದಳವು ನೆರವಾಗುತ್ತಿದೆ.