ಮಹಾ ಕುಂಭಮೇಳ ಸಂತ್ರಸ್ತರ ನೆರವಿಗೆ ಮಸೀದಿಗಳನ್ನು ತೆರೆದ ಮುಸ್ಲಿಮರು!
25,000 ಯಾತ್ರಾರ್ಥಿಗಳಿಗೆ ಆಶ್ರಯ, ಆಹಾರ ಹಾಗೂ ಕಂಬಳಿಗಳ ಸರಬರಾಜು

ಪ್ರಯಾಗ್ ರಾಜ್: ಜನವರಿ 28ರಂದು ಮೌನಿ ಅಮಾವಾಸ್ಯೆ ಪ್ರಯುಕ್ತ ಅಮೃತ ಸ್ನಾನ ಮಾಡುವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಮುಸ್ಲಿಮರು ತಮ್ಮ ಮಸೀದಿಗಳ ಬಾಗಿಲನ್ನು ತೆರೆದು, ಅವರಿಗೆ ಆಶ್ರಯ, ಆಹಾರ ಹಾಗೂ ಕಂಬಳಿಗಳನ್ನು ಒದಗಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿರುವ ಸಂಗತಿ ವರದಿಯಾಗಿದೆ.
ಗಂಗಾ ನದಿಯ ಸಂಗಮದಲ್ಲಿ ಜರುಗಿದ ಕಾಲ್ತುಳಿತದಲ್ಲಿ ಸುಮಾರು 40 ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಭಯಾನಕ ಘಟನೆಯ ನಂತರ, ಹಲವರು ತಮ್ಮ ಪ್ರೀತಿಪಾತ್ರರಿಗಾಗಿ ಹತಾಶೆಯಿಂದ ಹುಡುಕಾಟ ನಡೆಸುತ್ತಿದ್ದರು. ಈ ಗದ್ದಲದಲ್ಲಿ ತಮ್ಮ ಸಂಬಂಧಿಕರ ಮೃತದೇಹಗಳು ಕಳೆದು ಹೋಗಿರಬಹುದು ಎಂದು ಗದ್ಗದಿತರಾಗಿದ್ದ ಜನರು, ಕೈಮುಗಿದು ಪ್ರಾರ್ಥಿಸುತ್ತಿದ್ದರು. ಆಸ್ಪತ್ರೆಗಳು ರಕ್ತಸಿಕ್ತ ಮೃತದೇಹ ಹಾಗೂ ಗಾಯಾಳುಗಳಿಂದ ತುಂಬಿ ತುಳುಕುತ್ತಿದ್ದವು.
ಮಹಾ ಕುಂಭಮೇಳಕ್ಕಾಗಿ ಮಾಡಲಾಗಿದ್ದ ವ್ಯವಸ್ಥೆಗಳು ನೆಲಕಚ್ಚಿದ್ದರಿಂದ, ಪ್ರಾಧಿಕಾರಗಳು ಆ ಪ್ರದೇಶದಲ್ಲಿ ಪ್ರವೇಶಕ್ಕೆ ತಡೆ ಹೇರಿದವು. ಇದರಿಂದ ಯಾತ್ರಾರ್ಥಿಗಳು ತಾವು ಎಲ್ಲಿಗೆ ತಲುಪಿದ್ದರೋ, ಅಲ್ಲಿಯೇ ಸಿಲುಕಿಕೊಂಡು ಒದ್ದಾಡತೊಡಗಿದರು.
ಜನವರಿ 29ರಂದು ಪ್ರಯಾಗ್ ರಾಜ್ ನಲ್ಲಿನ ಹತ್ತು ಪ್ರದೇಶಗಳಲ್ಲಿ ತಮ್ಮ ಮಸೀದಿಗಳು, ಸಮಾಧಿಗಳು, ದರ್ಗಾಗಳು, ಇಮಾಂಬರಗಳು ಹಾಗೂ ತಮ್ಮ ನಿವಾಸಗಳ ಬಾಗಿಲನ್ನು ತೆರೆದ ಮುಸ್ಲಿಮರು, ಸುಮಾರು 25,000ದಿಂದ 26,000 ಯಾತ್ರಾರ್ಥಿಗಳಿಗೆ ಸ್ಥಳಾವಕಾಶ ಒದಗಿಸಿದರು. ಅಗತ್ಯವಿದ್ದವರಿಗೆ ಆಹಾರ, ಬೆಚ್ಚನೆಯ ಹಾಸಿಗೆ ಹಾಗೂ ವೈದ್ಯಕೀಯ ನೆರವನ್ನು ಒದಗಿಸಿದರು.
Dainik Bhaskar ವರದಿಯ ಪ್ರಕಾರ, ಕಾಲ್ತುಳಿತ ಘಟನೆಯಿಂದ ಹೈವೇಗಳಲ್ಲಿ ಸಂಚಾರ ದಟ್ಟಣೆಯುಂಟಾಗಿ, ಸಾವಿರಾರು ಮಂದಿ ತಾವಿದ್ದಲ್ಲಿಯೇ ಸಿಲುಕಿಕೊಂಡರು. ಬಸ್ ಗಳು ದಾರಿ ಮಧ್ಯದಲ್ಲೇ ನಿಂತು ಹೋಗಿದ್ದರಿಂದ, ಅವರೆಲ್ಲ ಬೀದಿಗಳಲ್ಲಿ ತಮ್ಮ ರಾತ್ರಿಯನ್ನು ಕಳೆಯುವಂತಾಯಿತು.
ಈ ರಾತ್ರಿಯ ನಂತರ, ಜನವರಿ 29ರಂದು, ಖುಲ್ದಾಬಾದ್, ನಖ್ಖಸ್ ಕೊಹ್ನಾ, ರೋಶನ್ ಬಾಘ್, ಹಿಮ್ಮತ್ ಗಂಜ್, ರಾಣಿ ಮಂಡಿ ಹಾಗೂ ಶಾಗಂಜ್ ನಿವಾಸಿಗಳು ಯಾತ್ರಾರ್ಥಿಗಳನ್ನು ತಮ್ಮ ನಿವಾಸಕ್ಕೆ ಸ್ವಾಗತಿಸಿದರು.
ಖುಲ್ದಾಬಾದ್ ಸಬ್ಝಿ ಮಂಡಿ ಮಸೀದಿ, ಬಡಾ ತಾಝಿಯ ಇಮಾಂಬರ, ಹಿಮ್ಮತ್ ಗಂಜ್ ದರ್ಗಾ ಹಾಗೂ ಚೌಕ್ ಮಸೀದಿಯಂತಹ ಮಸೀದಿಗಳನ್ನು ತಾತ್ಕಾಲಿಕ ಸೂರಾಗಿ ಮಾರ್ಪಡಿಸಲಾಯಿತು. ಮುಸ್ಲಿಂ ಸಮುದಾಯದ ಸದಸ್ಯರು ಯಾತ್ರಾರ್ಥಿಗಳಿಗೆ ಟೀ, ಉಪಾಹಾರ ಹಾಗೂ ಊಟವನ್ನು ಪೂರೈಸಿದರು. ಸ್ಥಳೀಯರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದ ಭಕ್ತಾದಿಗಳಿಗೆ ಹಲ್ವಾಪೂರಿ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಆಯೋಜಿಸಿದರು.
ಈ ಕುರಿತು Dainik Bhaskar ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಬಹದ್ದೂರ್ ಗಂಜ್ (ಡೈರಾ) ನಿವಾಸಿ ಮುಹಮ್ಮದ್ ಇರ್ಶಾದ್, “ಅವರು ನಮ್ಮ ಅತಿಥಿಗಳು” ಎಂದು ಹೇಳಿದ್ದಾರೆ.
“ಕಾಲ್ತುಳಿತ ಘಟನೆಯ ನಂತರ, ಸಾವಿರಾರು ಮಂದಿ ಕೊರೆಯುವ ಚಳಿಯಲ್ಲಿ ಒದ್ದಾಡುತ್ತಿರುವುದನ್ನು ನಾವು ಕಂಡೆವು. ನಾವು ತಕ್ಷಣವೇ ಮಸೀದಿಗಳು ಹಾಗೂ ದರ್ಗಾಗಳನ್ನು ತೆರೆದು, ಎಷ್ಟು ಸಾಧ್ಯವೊ ಅಷ್ಟು ಜನರನ್ನು ನಮ್ಮ ಮನೆಗಳಿಗೆ ಸ್ವಾಗತಿಸಿದೆವು. ಅವರ ಊಟ ಹಾಗೂ ವಾಸ್ತವ್ಯವನ್ನು ನಾವು ಖಾತರಿ ಪಡಿಸಿದೆವು. ಅವರು ಪ್ರಯಾಗ್ ರಾಜ್ ಗೆ ಅತಿಥಿಗಳಾಗಿದ್ದು, ನಾವು ಅವರನ್ನು ನಮ್ಮ ಕೈಲಾದಷ್ಟು ಆರೈಕೆ ಮಾಡಿದೆವು” ಎಂದು ಅವರು ತಿಳಿಸಿದ್ದಾರೆ.
“ಹಿಂದೂಗಳು ತಮ್ಮ ಧಾರ್ಮಿಕ ಪದ್ಧತಿಯನ್ನು ನೆರವೇರಿಸುತ್ತಿದ್ದು, ಮುಸ್ಲಿಮರಾಗಿ ನಾವು ಮಾನವೀಯ ಸೇವೆಯ ಕರ್ತವ್ಯವನ್ನು ಪೂರೈಸುತ್ತಿದ್ದಾರೆ. ಯಾರೂ ಕೂಡಾ ಆಹಾರ ಅಥವಾ ಸೂರಿನ ಕೊರತೆಯಿಂದ ನರಳದಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆಯಾಗಿದೆ. ವಯೋವೃದ್ಧ ಯಾತ್ರಾರ್ಥಿಗಳು ತಮ್ಮ ಗಮ್ಯವನ್ನು ತಲುಪಲು ನಾವು ನೆರವು ನೀಡಿದೆವು. ಇಲ್ಲಿಗೆ ಬಂದವರು ಮಾನವೀಯತೆಯ ಸಂದೇಶದೊಂದಿಗೆ ಮರಳಬೇಕೆನ್ನುವುದೇ ನಮ್ಮ ಬಯಕೆಯಾಗಿದೆ” ಎಂದು ಚೌಕ್ ಪ್ರದೇಶದ ಶಿಕ್ಷಕರಾದ ಮಸೂದ್ ಅಹ್ಮದ್ ಹೇಳಿದ್ದಾರೆ.
“ಮಹಾ ಕುಂಭಮೇಳದಲ್ಲಿ ಮುಸ್ಲಿಮರಿಗೆ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಈ ಮುನ್ನ ಪ್ರಕಟಿಸಿದರೂ, ಹಣೆಬರಹ ಈ ಕಾರ್ಯಕ್ರಮವನ್ನು ನಮ್ಮ ನೆರೆಹೊರೆಗೇ ತಂದಿತು. ನಾವು ಸಹಾಯ ಮಾಡುವುದು ಸಹಜವಾಗಿದೆ” ಎಂದು ಖುಲ್ದಾಬಾದ್ ನಿವಾಸಿ ಅಫ್ಸರ್ ಮಹಮೂದ್ ಅಭಿಪ್ರಾಯ ಪಟ್ಟಿದ್ದಾರೆ.
ಚೌಕ್ ಪ್ರದೇಶದ ಮೊಹಿನುದ್ದೀನ್ ಕೂಡಾ ಇದೇ ಬಗೆಯ ಅನಿಸಿಕೆ ವ್ಯಕ್ತಪಡಿಸಿದ್ದು, “ಯಾರೂ ಕೂಡಾ ತೆರೆದ ಆಕಾಶದಡಿ ತಮ್ಮ ರಾತ್ರಿಯನ್ನು ಕಳೆಯುವುದು ನಮಗೆ ಬೇಡವಾಗಿತ್ತು. ಹೀಗಾಗಿ ನಾವು ನಮ್ಮ ಬಾಗಿಲುಗಳನ್ನು ತೆರೆದೆವು” ಎಂದು ಹೇಳಿದ್ದಾರೆ.
ಚಳಿಯಿಂದ ನಡುಗುತ್ತಿದ್ದವರಿಗೆ ಸ್ಥಳೀಯ ನಿವಾಸಿಗಳು ಹೇಗೆ ಕ್ಷಿಪ್ರವಾಗಿ ಕಂಬಳಿ ಹಾಗೂ ಹೊದಿಕೆಗಳನ್ನು ವ್ಯವಸ್ಥೆಗೊಳಿಸಿದರು ಎಂದು ನಾಗರಿಕ ಸೇವಾ ಕಾರ್ಯಕರ್ತ ಮುಹಮ್ಮದ್ ಅಝಂ ಸ್ಮರಿಸುತ್ತಾರೆ.
“ರಾತ್ರಿ ವೇಳೆ ಜನರು ಒದ್ದಾಡದಿರುವುದನ್ನು ಖಾತರಿ ಪಡಿಸಲು ನಮ್ಮಿಂದ ಏನು ಸಾಧ್ಯವಿತ್ತೊ ಅದನ್ನೆಲ್ಲ ಮಾಡಿದೆವು. ಆಹಾರವನ್ನು ತಕ್ಷಣವೇ ವ್ಯವಸ್ಥೆಗೊಳಿಸಲಾಯಿತು” ಎಂದು ಅವರು ತಿಳಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ತೋರಿರುವ ಈ ಕೋಮು ಸೌಹಾರ್ದತೆ ಹಾಗೂ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪ್ರಯಾಗ್ ರಾಜ್ ಜನತೆ ಎಲ್ಲ ವಿಭಾಗಗಳಲ್ಲೂ ಮಾನವೀಯ ನೆರವು ನೀಡುವ ಮೂಲಕ ಹೇಗೆ ಮಾನವೀಯತೆಗೆ ನಿದರ್ಶನವಾದರು ಎಂಬುದರ ಮೇಲೆ Dainik Bhaskar ಸುದ್ದಿ ಸಂಸ್ಥೆಯ ವರದಿ ಬೆಳಕು ಚೆಲ್ಲಿದೆ.